ಹೆಣ್ಣು ಕೊಟ್ಟ ಅತ್ತೆಗಿಂತ ನಾಯಿಯೇ ಮೇಲು: ಒಬಾಮಾ

Posted by:
Updated: Friday, August 17, 2012, 15:15 [IST]

ವಾಷಿಂಗ್ಟನ್, ಆ.17: 'ಹೆಣ್ಣು ಕೊಟ್ಟ ಅತ್ತೆಗಿಂತ ನನ್ನ ನಾಯಿಯೇ ಲೇಸು' ಎಂದು ದೊಡ್ಡಣ್ಣ ಬರಾಕ್ ಒಬಾಮಾ ಹೇಳಿದ್ದಾರೆ. ಆದರೆ, ಮತ್ತೊಂದು ಅವಧಿಗೆ ಅಮೆರಿಕದ ಅಧ್ಯಕ್ಷನಾಗುವ ಕನಸು ಹೊತ್ತಿರುವ ಒಬಾಮಾ ಇಂಥಾ ಮಾತಾ ಹೇಳೋದು ಎಂದು ಗರಂ ಆಗಿದ್ದಾರೆ ಅತ್ತೆಯರು!

ಏನಾಯಿತೆಂದರೆ ನಮ್ಮ ರಾಜಕಾರಣಿಗಳಂತೆ ಮೊನ್ನೆ ಚುನಾವಣೆ ಪ್ರಚಾರದ ವೇಳೆ ಭೀಷಣ ಭಾಷಣಕ್ಕೆ ಇಳಿದ ಒಮಾಬಾ, 'ಮತದಾರ ಪ್ರಭುಗಳೇ ನಿಮಗೊಂದು ಗುಟ್ಟು ಹೇಳುವೆ. ನನ್ನ ನಾಯಿ 'ಬೌ' ಇದೆಯಲ್ಲಾ ಅದು ನನ್ನ ಅತ್ತೆಗಿಂತ ವರ್ಚಸ್ವಿ ಮತ್ತು ಆಕರ್ಷಕ' ಎಂದು ಹೇಳಿ ಬಿಟ್ಟಿದ್ದಾರೆ.

dog-bo-is-more-charismatic-than-mother-in-law-obama

ತಕ್ಷಣ ಅದೇನು ಜ್ಞಾನೋದಯವಾಯಿತೋ ಅಥವಾ ಶ್ವೇತಭವನದಲ್ಲಿರುವ ಅತ್ತೆಯ ಚಿತ್ರಣ ಜ್ಞಾಪಕಕ್ಕೆ ಬಂತೋ ನಾಲಿಗೆ ಕಚ್ಚಿಕೊಂಡವರೇ 'ಅಯ್ಯೋ ಅದು ಹಾಗಲ್ಲ. ನಾನು ಹಾಗೆ ಹೇಳಿಯೇ ಇಲ್ಲ' ಅಂತೆಲ್ಲ ಥೇಟ್ ನಮ್ಮ ರಾಜಕಾರಣಿಗಳ ಹಾಗೆಯೇ ವಟಗುಟ್ಟಿದ್ದಾರೆ.

 
ಏನಾಯಿತೆಂದರೆ ಒಬಾಮಾ ಹೆಂಡ್ತಿ ಮಿಷೆಲ್ ಗೊತ್ತಲ್ಲಾ? ಆಕೆ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ ವೇದಿಕೆಯನ್ನೇರಿದ ಒಬಾಮಾ 'ಇಂದು ನನಗೆ ಅನ್ನಿಸಿದ್ದನ್ನು ಹೇಳುವೆ. ಈ ಆಕರ್ಷಣೆ ವಸ್ತು/ವ್ಯಕ್ತಿಗಳ ಪಟ್ಟಿಯಲ್ಲಿ ನೀವೆಲ್ಲ ಅಂದುಕೊಂಡಂತೆ ನನ್ಹೆಂಡ್ತಿಯೇ ಮೊದಲ ಸ್ಥಾನ ಅಲಂಕರಿಸುತ್ತಾಳೆ.

ಆನಂತರ ಇದ್ದೇ ಇದ್ದಾರೆ ನನ್ನ ಮುದ್ದಿನ ಇಬ್ರು ಹೆಣ್ಮಕ್ಕಳು (ಸಶಾ ಮತ್ತು ಮಲಿಯಾ). ಆಮೇಲೆ ಬರೋದೇ very interesting ನನ್ನ ಸಾಕು ನಾಯಿ ಬೌ. ಎಲ್ಲಾ ಆದ್ಮೇಲೆ ನನ್ನತ್ತೆ ಬರ್ತಾರೆ. ಕೊನೆಯ ಸ್ಥಾನ ನನ್ನದೇ' ಎಂದು ಪ್ಯಾಲಿ ನಗೆ ನಕ್ಕಿದ್ದಾರೆ.

ಆದರೆ ಇಷ್ಟು ಹೇಳುವಷ್ಟೊತ್ತಿಗೆ ಅದೆಷ್ಟು ಬೆವತಿದ್ದನೋ ದೊಡ್ಡಣ್ಣ ನಿಮಿಷಾರ್ಧದಲ್ಲಿ ಮಾತು ಬದಲಿಸಿ 'ನನ್ನ ಅತ್ತೆ ಅದೇ ಮಿಷೆಲ್ಲಳ ತಾಯಿ ಮರಿಯಾ ರಾಬಿನ್ ಸನ್ ಇದ್ದಾರಲ್ಲಾ. ಆಕೆ ನಿಜಕ್ಕೂ ನನ್ ಪೋರ್ಚುಗೀಸ್ ನೀರು ನಾಯಿಗಿಂತ ಪಸಂದಾಗಿದ್ದಾರೆ ಕಣ್ರಿ' ಅಂತ ರಾಗ ಬದಲಿಸಿದರು.

ಅಮೆರಿಕದ 'ಪ್ರಥಮ ನಾಯಿ' ಬೌ ಶ್ವೇತಭವನ ಪ್ರವೇಶಿಸಿದ ಕಥೆಯೂ interesting ಆಗಿದೆ ಸ್ವಲ್ಪ ಕೇಳಿ. ಒಬಾಮಾ ಆಗ ಮೊದಲ ಬಾರಿಗೆ ಅಧ್ಯಕ್ಷನಾಗುವ ಕನಸು ಕಾಣುತ್ತಿದ್ದ ಕಾಲ. ಎಲ್ಲ ಮಕ್ಕಳಂತೆ ಅವರ ಮುದ್ದಿನ ಮಕ್ಕಳೂ 'ನಾಯಿ ಬೇಕೂ' ಎಂದು ಹಠ ಹಿಡಿದಾಗ ಎಲ್ಲ ಅಪ್ಪಂದಿರಂತೆ ಆತನೂ ಗದರಿಕೊಂಡಿದ್ದ.

ಕೊನೆಗೆ ಒಬಾಮಾ ಅಧ್ಯಕ್ಷರಾಗುತ್ತಿದ್ದಂತೆ ಸೆನೆಟರ್ ಎಡ್ವರ್ಡ್ ಕೆನೆಡಿ ಅವರು ಬೌ ನಾಯಿಯನ್ನು ಒಬಾಮಾ ಮಕ್ಕಳ ಮುಂದೆ ತಂದುಬಿಟ್ಟಿದ್ದರು. ಏನೇ ಆಗಲಿ ಒಬಾಮಾ ಸಾಹೇಬರು, ಅದೂ ಚುನಾವಣೆ ಪ್ರಚಾರದ ವೇಳೆ ಹೀಗೆ ಹೇಳುವುದೇ? ಅಥವಾ ಜಾಗತಿಕ ಸತ್ಯವನ್ನೇ ಹೇಳಿದ್ದಾರೆ ಬಿಡಿ ಅನ್ನುತ್ತೀರಾ!?

Story first published: Friday, August 17, 2012, 14:46 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS