ಶಾಂತಾಗೆ ಹಿನ್ನಡೆ, ಮತ ಮರುಎಣಿಕೆಗೆ ಸುಪ್ರೀಂ ಅಸ್ತು

Posted by:
Updated: Thursday, August 16, 2012, 18:03 [IST]

Set Back to MP J Shantha
ನವದೆಹಲಿ, ಆ.16: ಲೋಕಸಭೆ ಚುನಾವಣೆ 2009ರ ಅಕ್ರಮ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಜೂ.11 ರಂದು ಬಿಜೆಪಿ ಸಂಸದೆ ಜೆ ಶಾಂತಾ ಅವರ ಲೋಕಸಭಾ ಸದಸ್ಯತ್ವವನ್ನು ಅಸಿಂಧುಗೊಳಿಸಿ ಹೈಕೋರ್ಟ್ ನ್ಯಾಯಪೀಠ ಆದೇಶವನ್ನು ಸುಪ್ರೀಂಕೋರ್ಟ್ ಗುರುವಾರ (ಆ.16) ಎತ್ತಿ ಹಿಡಿದಿದೆ. ಬಳ್ಳಾರಿ ಕ್ಷೇತ್ರದ ಚುನಾವಣೆ ತಕರಾರಿಗೆ ಸಂಬಂಧಿಸಿದಂತೆ ನಡೆಯಬೇಕಿದ್ದ ಮರು ಮತ ಎಣಿಕೆ ಕಾರ್ಯಕ್ಕೂ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಸಂಸದೆ ಜೆ ಶಾಂತಾ ಅವರಿಗೆ ತೀವ್ರ ಹಿನ್ನೆಡೆಯಾಗಿದೆ.

ಹೈಕೋರ್ಟ್ ನ ಆದೇಶ ಪ್ರಶ್ನಿಸಿ ಸಂಸದೆ ಜೆ ಶಾಂತಾ ಅವರು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ನ್ಯಾ ಶೈಲೇಂದ್ರ ಕುಮಾರ್ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶ 2009ರ ಲೋಕಸಭೆ ಚುನಾವಣೆ ಅಕ್ರಮ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಮರು ಮತ ಎಣಿಕೆಗೆ ಆದೇಶ ನೀಡಿತ್ತು. ಇದರಿಂದ ಆಡಳಿತಾರೂಢ ಬಿಜೆಪಿ ಸರ್ಕಾರ, ಬಳ್ಳಾರಿ ಗಾಲಿ ರೆಡ್ಡಿ ಕುಟುಂಬ, ಬಳ್ಳಾರಿ ಪಕ್ಷೇತರ ಶಾಸಕ ಶ್ರೀರಾಮುಲು ಅವರಿಗೆ ತೀವ್ರ ಮುಜುಗರ ಉಂಟಾಗಿತ್ತು.

ಆದರೆ, ನಂದೀಶ್ ರೆಡ್ಡಿ ಪ್ರಕರಣದಲ್ಲಿ ಆರು ತಿಂಗಳೊಳಗೆ ಮರು ಚುನಾವಣೆ ನಡೆಸುವಂತೆ ಸೂಚಿಸಿದ್ದ ನ್ಯಾಯಪೀಠ, ಈ ಪ್ರಕರಣದಲ್ಲಿ ಮರು ಮತ ಎಣಿಕೆಗೆ ಆದೇಶಿಸಿತ್ತು. 4 ವಾರಗಳ ಒಳಗೆ ಮರು ಮತ ಎಣಿಕೆ ನಡೆಸುವಂತೆ ಸೂಚಿಸಲಾಗಿತ್ತು. ಆದರೆ, ನಂತರ ಶಾಂತಾ ಅವರ ಮೇಲ್ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು. ಆದರೆ, ಗುರುವಾರ (ಆ.16) ಈ ಹಿಂದೆ ನೀಡಿದ್ದ ತೀರ್ಪಿಗೆ ವ್ಯತಿರಿಕ್ತವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಏನಿದು ಪ್ರಕರಣ?: ಬಳ್ಳಾರಿಯಲ್ಲಿ 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಜಾತಿ ನಮೂದು ಹಾಗೂ ಚುನಾವಣೆ ಅಕ್ರಮ ನಡೆಸಿ ಶ್ರೀಮತಿ ಜೆ. ಶಾಂತಾ ಅವರು ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಚಂದ್ರೇಗೌಡ ಎಂಬುವವರು ತಕರಾರು ಅರ್ಜಿ ಸಲ್ಲಿಸಿದ್ದರು.

ಬಳ್ಳಾರಿಯ ದೇವಿನಗರ ಕ್ಲಬ್ ರಸ್ತೆ, 2ನೇ ಅಡ್ಡರಸ್ತೆಯ ನಿವಾಸಿಯಾದ ಶ್ರೀಮತಿ ಜೆ ಶಾಂತಾ ನಾಗರಾಜು 2009 ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಶಾಂತಾ ಅವರು ವಾಲ್ಮೀಕಿ ಜನಾಂಗಕ್ಕೆ ಸೇರಿರುವುದಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಅಭ್ಯರ್ಥಿ ಅರ್ಜಿಯಲ್ಲಿ ನಮೂದಿಸಿದ್ದರು.

ಆದರೆ, ಅವರು ಬೋವಿ ಜಾತಿಗೆ ಸೇರಿದ್ದಾರೆ. ಹಾಗಾಗಿ ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದಾರೆ ಎಂದು ಚಂದ್ರಗೌಡ ಅವರ ಪರ ವಕೀಲ ಕಾಂತರಾಜ್ ಅವರು ವಾದಿಸಿದ್ದರು.

ಮರು ಎಣಿಕೆ ಸಾಧ್ಯತೆ: 2009ರಲ್ಲಿ ಚುನಾವಣೆ ನಡೆದಿರುವುದರಿಂದ ಅಂದು ಅಕ್ರಮ ಮತ ಎಣಿಕೆ ನಡೆದಿದೆ ಎಂದು ಸಾಬೀತು ಮಾಡಿದರು. ಅದೇ ಮತ ಎಣಿಕೆ ಯಂತ್ರಗಳನ್ನು ಬಳಸಿ ಮರು ಎಣಿಕೆ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿತ್ತು.

ಮತ ಎಣಿಕೆಯಲ್ಲಿ ವೋಟಿಂಗ್ ಮೆಷಿನ್ ಬದಲಾಯಿಸಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮೂರು ವರ್ಷದ ಮೊದಲೇ ನಾವು ಮತ ಎಣಿಕೆ ಯಂತ್ರಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದಿರಿಸುವಂತೆ ಕೋರ್ಟ್ ಗೆ ಮನವಿ ಸಲ್ಲಿಸಿ ಆದೇಶ ಪಡೆದಿದ್ದೆವು. ಹಾಗಾಗಿ, ಅದೇ ಮತ ಎಣಿಕೆ ಯಂತ್ರಗಳ ಮೂಲಕ ಮರು ಎಣಿಕೆ ಸಾಧ್ಯ ಎಂದು ವಕೀಲ ಕಾಂತರಾಜ್ ಸ್ಪಷ್ಟಪಡಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ಬಳ್ಳಾರಿ ಜಿಲ್ಲಾಧಿಕಾರಿ ಬಿಶ್ವಾಸ್ ಅವರು ಜುಲೈ 5 ರಂದು ಮತ ಎಣಿಕೆಗೆ ಅವಕಾಶ ನೀಡವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

15ನೇ ಸುತ್ತಿನ ತನಕ ಲೀಡ್ ನಲ್ಲಿದ್ದೆ 2 ನಿಮಿಷದಲ್ಲಿ 2 ಸುತ್ತಿನ ಎಣಿಕೆ ಮುಗಿಸಿಬಿಟ್ಟರು. 1,120 ಮತಗಳ ಅಂತರದಿಂದ ಸೋಲು ಕಾಣಬೇಕಾಯಿತು. ಕೊನೆ ಸುತ್ತಿನ ಎಣಿಕೆಯಲ್ಲಿ ವ್ಯತ್ಯಯವಾಗಿದೆ ಎಂದು ಪರಾಜಿತ ಅಭ್ಯರ್ಥಿ ಹನುಮಂತಪ್ಪ ಹೇಳಿದ್ದರು.

Story first published: Thursday, August 16, 2012, 17:33 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS