ಮಂಗಳನ ಅಂಗಳಕ್ಕೆ ಇಳಿದ ಕ್ಯೂರಿಯಾಸಿಟಿ

Posted by:
Updated: Monday, August 6, 2012, 14:44 [IST]

ಕ್ಯಾಲಿಫೋರ್ನಿಯಾ, ಆ.6: ನಾಸಾದ ಮೊಬೈಲ್ ಪ್ರಯೋಗಾಲಯ ಹೊತ್ತ ಶೋಧಕ ಕ್ಯೂರಿಯಾಸಿಟಿ ಯಶಸ್ವಿಯಾಗಿ ಕೆಂಪು ಗ್ರಹ ಮಂಗಳನ ಅಂಗಳಕ್ಕೆ ಇಳಿದಿದೆ. I'm safely on the surface of Mars, GALE CRATER I AM IN YOU!!! ಎಂದು ಕ್ಯೂರಿಯಾಸಿಟಿ ರೋವರ್ ನ ಅಧಿಕೃತ ಟ್ವೀಟರ್ ಸಂದೇಶ ಹೊರಬಿದ್ದಿದೆ.

ಭೂಮಿಯಿಂದ ಸುಮಾರು ಎಂಟು ತಿಂಗಳ ಪಯಣವನ್ನು ಮುಗಿಸಿ ಕೆಂಪು ಗ್ರಹದ ಮೇಲೆ ಕ್ಯೂರಿಯಾಸಿಟಿ ಇಳಿಯುತ್ತಿದ್ದಂತೆ ನಾಸಾದ ವಿಜ್ಞಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಪೂರ್ಣ ಪ್ರಮಾಣದ ಸುಸಜ್ಜಿತ ಮೊಬೈಲ್ ಪ್ರಯೋಗಾಲಯ ಹೊತ್ತ 'ಕ್ಯೂರಿಯಾಸಿಟಿ ರೋವರ್' ಮಂಗಳವಾರ (ಆ.6) ಬೆಳಗ್ಗೆ ನಿಗದಿತ ಸಮಯಕ್ಕೆ ಸರಿಯಾಗಿ ಇಳಿದಿದೆ.

ಲಾಸ್ ಏಂಜಲೀಸ್ ನಲ್ಲಿರುವ ಜೆಟ್ ಪ್ರೊಪಲ್ಶನ್ ಪ್ರಯೋಗಾಲಯದ ಇಂಜಿನಿಯರ್ ಗಳು ಈ ಶೋಧ ನೌಕೆಯನ್ನು ಇಳಿಸುವ ಕಾರ್ಯದಲ್ಲಿ ತೊಡಗಿದ್ದರು. ಒಂದು ಟನ್ ತೂಕದ, ಆರು ಚಕ್ರಗಳಿರುವ, 17 ಕೆಮೆರಾ ಹೊಂದಿರುವ ಅಣುಶಕ್ತಿ ಚಾಲಿತ ಈ ವಾಹನವನ್ನು ಕರಾರುವಾಕ್ಕಾಗಿ ಇಳಿಸುವ ಪ್ರಕ್ರಿಯೆ ಅಷ್ಟು ಸುಲಭದ ಮಾತಲ್ಲ. ಸುಮಾರು 2.5 ಬಿಲಿಯನ್ ಡಾಲರ್ ಮೌಲ್ಯದ ಈ ಯೋಜನೆ ಹಿಂದೆ ಸುಮಾರು 30 ವರ್ಷದ ಪರಿಶ್ರಮ ಅಡಗಿದೆ.

ಮಂಗಳನ ವಾತಾವರಣ ನೌಕೆಯನ್ನು ಇಳಿಸಲು ಸೂಕ್ತವಾಗಿದ್ದು, ಎಲ್ಲ ತಾಂತ್ರಿಕ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಭೂಮಿಯಿಂದ 567 ದಶಲಕ್ಷ ಕಿಲೋಮೀಟರ್ ದೂರದ ಮಂಗಳ ಗ್ರಹದತ್ತ ಸುಮಾರು ಎಂಟೂವರೆ ತಿಂಗಳ ಹಿಂದೆ ಕೇಪ್ ಕಾನಾವೆರಲ್, ಫ್ಲೋರಿಡಾದಿಂದ ನೌಕೆಯನ್ನು ಹಾರಿ ಬಿಡಲಾಗಿತ್ತು.

ಪುಟ್ಟ ಕಾರಿನ ಗಾತ್ರದ ಈ ನೌಕೆ ಮಂಗಳದ ದಕ್ಷಿಣಾರ್ಧ ಗೋಳದ ಗೇಲ್ ಕ್ರೇಟರ್ ಸಮೀಪನ ಸಮತಟ್ಟಾದ ನೆಲದಲ್ಲಿ ಇಳಿದಿದೆ.

ಮಂಗಳನ ವಾತಾವರಣ ಹೊರಗೆ ಗಂಟೆಗೆ 8,000 ಮೈಲು ವೇಗದಲ್ಲಿ ಸುತ್ತುತ್ತಿರುವ ಕ್ಯೂರಿಯಾಸಿಟಿ ನಿಧಾನವಾಗಿ ಮಂಗಳನ ಗುರುತ್ವಾಕರ್ಷಣ ಶಕ್ತಿಯ ವ್ಯಾಪ್ತಿಯೊಳಗೆ ಪ್ರವೇಶಿಸಿದೆ.

Story first published: Monday, August 06, 2012, 12:01 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS