ಬಿಎಸ್‌ವೈ ಅಮಿತಾಬ್ ಇದ್ದಂತೆ: ರೇಣುಕಾ ಮಾಸದ ನೆನಪು

Posted by:
Updated: Saturday, August 4, 2012, 11:02 [IST]

ಬೆಂಗಳೂರು, ಆ. 3: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕಕ್ಕೆ ಅಮಿತಾಭ್ ಬಚ್ಚನ್ ಇದ್ದಂತೆ. ಇದನ್ನು ಸ್ವತಃ ಬಿಜೆಪಿ ಹೈಕಮಾಂಡೇ ಈಹಿಂದೆ ಹೇಳಿತ್ತು ಎಂದು ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ನೆನಪಿಸಿದ್ದಾರೆ. ಇದರೊಂದಿಗೆ ಯಡಿಯೂರಪ್ಪ ಬಗೆಗಿನ ತಮ್ಮ ಅನೂಚ ಸ್ವಾಮಿನಿಷ್ಠೆಯನ್ನು ರೇಣುಕಾ ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದ್ದಾರೆ.

ಸಚಿವ ರೇಣುಕಾಚಾರ್ಯ ಅವರು ವಿಧಾನಪರಿಷತ್ ಮೊಗಸಾಲೆಯಲ್ಲಿ ಹೇಳಿದ ಮಾತುಗಳು ಹೀಗಿವೆ: ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕು ಎಂಬುದು ಪಕ್ಷದ ಕಾರ್ಯಕರ್ತರ ಅಭಿಲಾಷೆ. ಇದನ್ನು ವರಿಷ್ಠರು ಕೂಡಲೇ ನೆರವೇರಿಸಬೇಕು.

ಪಕ್ಷದ ವರಿಷ್ಠರಿಗೂ ಇದರ ಬಗ್ಗೆ ಅರಿವಿದೆ. ಅದಕ್ಕೇ ಪಕ್ಷದ ವರಿಷ್ಠರೊಬ್ಬರು ಈ ಹಿಂದೆ 'ಭಾರತಕ್ಕೊಬ್ಬನೇ ಅಮಿತಾಬ್ ಬಚ್ಚನ್, ಕರ್ನಾಟಕಕ್ಕೊಬ್ಬನೇ ಯಡಿಯೂರಪ್ಪ' ಎಂದು ಹೇಳಿರುವುದು.

ಬಿಎಸ್‌ವೈ ಅತ್ಯುತ್ತಮ ಆಡಳಿತ ನೀಡಿದ್ದಾರೆ. ಅವರ ಜನಪ್ರಿಯತೆ ಹಿಂದಿಗಿಂತೊಲೂ ದುಪ್ಪಟ್ಟಾಗಿದೆ. ಅವರಿಗೆ ಯಾವುದೇ ಅಧಿಕಾರ ಇಲ್ಲ ಎಂಬುದು ಜನರ ನೋವಾಗಿದೆ. ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಯಡಿಯೂರಪ್ಪನವರು ಹೋರಾಟ ಮಾಡಿಕೊಂಡು ಪಕ್ಷ ಕಟ್ಟಿದ್ದಾರೆ.

ಅವರ ಹೋರಾಟದ ಫಲವಾಗಿ 2008ರಲ್ಲಿ ಪಕ್ಷ ಅಧಿಕಾರಕ್ಕೆ ಬಂತು. ಈಗ ಮುಂದಿನ ಚುನಾವಣೆಯನ್ನೂ ಅವರ ನೇತೃತ್ವದಲ್ಲೇ ಎದುರಿಸಬೇಕಾಗಿದೆ. ಬಿಜೆಪಿಗೆ ಅವರ ಸಾರಥ್ಯ ಅನಿವಾರ್ಯವಾಗಿದೆ.

ಸದಾನಂದ ಗೌಡರ ಆ 11 ತಿಂಗಳು: ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 11 ತಿಂಗಳು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇರಲಿಲ್ಲ. ಆ 11 ತಿಂಗಳು ನಾವು ಸಚಿವರು, ಅವರು ಸಿಎಂ ಅಷ್ಟೇ. ಉಳಿದಂತೆ ಅಧಿಕಾರ ಬೇರೆಯವರ ಕೈಯಲ್ಲಿತ್ತು. ಆ ಆಡಳಿತ ಯಾರದೋ ಕಪಿಮುಷ್ಠಿಯಲ್ಲಿತ್ತು.

11 ತಿಂಗಳ ಅವಧಿಯಲ್ಲಿ ಡಿವಿ ಸದಾನಂದ ಗೌಡರು ಒಮ್ಮೆಯೂ ಸಚಿವರನ್ನು ಕರೆದು ಮಾತನಾಡಿಲ್ಲ. ಇಲಾಖೆಗಳ ಪರಿಶೀಲನೆ ನಡೆಸಲಿಲ್ಲ. ನಾವೇ ಅವರ ಬಳಿ ಹೋಗಿ ಇಲಾಖೆಗಳ ಪ್ರಗತಿ ಬಗ್ಗೆ ಚರ್ಚಿಸಲು ಹೋದರೆ ಅದಕ್ಕೆ ಅವರು ಅವಕಾಶವನ್ನೇ ನೀಡುತ್ತಿರಲಿಲ್ಲ.

ಸಚಿವರಷ್ಟೇ ಅಲ್ಲ, ಯಾವೊಬ್ಬ ಶಾಸಕರನ್ನೂ ಕರೆಸಿ ಮಾತನಾಡಲಿಲ್ಲ. ವೈಯಕ್ತಿಕ ಸಂಬಂಧಗಳು ತೀರಾ ಹಳಸಿದ್ದವು. ಹಾಗಾಗಿ ಮುಖ್ಯಮಂತ್ರಿಯಾಗಿ ಸದಾನಂದ ಗೌಡರ ಆ 11 ತಿಂಗಳು ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ.

Story first published: Friday, August 03, 2012, 09:21 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS