ನಂಬಿ, ಪ್ಯಾಲೆಸ್ ಗ್ರೌಂಡ್ಸ್ ವಾಣಿಜ್ಯ ಚಟುವಟಿಕೆ ಇನ್ನಿಲ್ಲ

Posted by:
Updated: Wednesday, February 27, 2013, 10:48 [IST]

ಬೆಂಗಳೂರು, ಆ.3: ಇಂದಿನಿಂದ ಜಾರಿಗೆ ಬರುವಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜಕೀಯ ಪಕ್ಷಗಳ ಸಭೆ-ಸಮಾರಂಭಗಳು ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ ಹೇರಿ ರಾಜ್ಯ ಸರಕಾರ ನಿನ್ನೆ (ಆಗಸ್ಟ್ 2) ಆದೇಶ ಹೊರಡಿಸಿದೆ.

ಈ ಸಂಬಂಧ ಸುಪ್ರೀಂ ಕೋರ್ಟ್ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಗೃಹ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವಿಧಾನ ಪರಿಷತ್ತಿನ ಸಭಾನಾಯಕ ವಿ. ಸೋಮಣ್ಣ ತಿಳಿಸಿದ್ದಾರೆ.

palace-grounds-no-more-ground-for-commercial-activities

ಅರಮನೆ ಮೈದಾನ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 1998ರಲ್ಲಿ ನೀಡಿರುವ ಮಧ್ಯಂತರ ಆದೇಶದಲ್ಲಿನ ಮಾರ್ಗಸೂಚಿಯನ್ನು ಉಲ್ಲಂಘಿಸಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಸದನ ಸಮಿತಿ ರಚನೆಗೆ ಸರ್ಕಾರ ಸಿದ್ಧವಿದೆ. ಆದರೆ ವಿಷಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಕಾರಣ, ಸಮಿತಿ ರಚಿಸಬೇಕೇ, ಬೇಡವೇ ಎಂಬ ಕುರಿತು ನಿರ್ಧರಿಸಲು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ನೇತೃತ್ವದಲ್ಲಿ 10 ದಿನಗಳಲ್ಲಿ ಸಭೆ ಕರೆದು ಚರ್ಚಿಸಲಾಗುವುದು ಎಂದು ಪರಿಷತ್ತಿನಲ್ಲಿ ಸೋಮಣ್ಣ ಹೇಳಿದರು.

468 ಎಕರೆ ವಿಸ್ತೀರ್ಣ ಹೊಂದಿರುವ ಅರಮನೆ ಮೈದಾನದಲ್ಲಿ ವಾಣಿಜ್ಯ ಕಾರ್ಯಕ್ರಮಗಳಿಗೆ ಅಕ್ರಮವಾಗಿ ಕಾಯಂ ಶೆಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಕಾರ್ಯಕ್ರಮ ಆಯೋಜಿಸುವವರು ಸರ್ಕಾರಿ ಅಧಿಕಾರಿಗಳ ಜೊತೆ ಶಾಮೀಲಾಗಿ, ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಆರ್.ವಿ. ವೆಂಕಟೇಶ್ ಬುಧವಾರ ಮಾಡಿದ್ದ ಪ್ರಸ್ತಾವಕ್ಕೆ ಸೋಮಣ್ಣ ಗುರುವಾರ ಈ ಭರವಸೆ ನೀಡಿದರು.

ಸೋಮಣ್ಣ ಅವರ ಉತ್ತರದಿಂದ ತೃಪ್ತರಾಗದ ವೆಂಕಟೇಶ್, ಖಾಸಗಿ ಕಾರ್ಯಕ್ರಮ ಸಂಘಟಿಸುವವರಿಗೆ ಸರ್ಕಾರ ನಿರ್ದಿಷ್ಟ ಷರತ್ತುಗಳನ್ನು ವಿಧಿಸುತ್ತಿಲ್ಲ. ವಾಣಿಜ್ಯ ಉದ್ದೇಶದ ಸಭೆ ಸಮಾರಂಭಗಳು, ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟು ಮಾಡುತ್ತಿವೆ ಎಂದು ದೂರಿದರು.

ಇದಕ್ಕೂ ಮುನ್ನ ಮಾತನಾಡಿದ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮತ್ತು ಜೆಡಿಎಸ್‌ನ ಎಂ.ಸಿ. ನಾಣಯ್ಯ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂಬ ಆರೋಪಗಳ ಕುರಿತು ಪರಿಶೀಲನೆ ನಡೆಸಲು ಜಂಟಿ ಸದನ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ಅರಮನೆ ಮೈದಾನದಲ್ಲಿ ಯಾವುದೇ ಶಾಶ್ವತ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ಫನ್ ವರ್ಲ್ಡ್ ಹಾಗೂ ಸ್ಟಾರ್ ಸಿಟಿ ಕಳೆದ ಹಲವಾರು ವರ್ಷಗಳಿಂದ ಅಲ್ಲಿವೆ. ಅವೆರಡಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅನುಮತಿ ನೀಡಿದ್ದು ಹೇಗೆ ಎಂದು ನಾಣಯ್ಯ ಪ್ರಶ್ನಿಸಿದರು.

ಪ್ಯಾಲೆಸ್ ಗ್ರೌಂಡ್ಸ್ ಪ್ರಮುಖ ಘಟನಾವಳಿಗಳು:

* ಜನವರಿ 15, 1996- ಪ್ಯಾಲೆಸ್ ಗ್ರೌಂಡ್ಸ್ ಸ್ವಾಧೀನಪಡಿಸಿಕೊಂಡು ಅಲ್ಲಿ ಉದ್ಯಾನವನ ನಿರ್ಮಾಣಕ್ಕೆ ಸರಕಾರಿ ಆದೇಶ ಪ್ರಕಟ.
* ನವೆಂಬರ್ 21, 1996- ರಾಜ್ಯ ಸರಕಾರದ ಆದೇಶವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ ಶ್ರೀಕಂಠದತ್ತ ಒಡೆಯರ್.
* ಮಾರ್ಚ್ 31, 1997- ಶ್ರೀಕಂಠದತ್ತ ಒಡೆಯರ್ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್.
* ಏಪ್ರಿಲ್ 10, 1997- ಸುಪ್ರೀಂ ಕೋರ್ಟ್ ಮೊರೆ ಹೋದ ಒಡೆಯರ್.
* ಏಪ್ರಿಲ್ 30, 1997- ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ.
* ಆ. 10, 1998- ಅರಮನೆ ಮೈದಾನ ಬಳಕೆಗೆ ಮಾರ್ಗಸೂಚಿ ಸೂತ್ರಗಳನ್ನು ನೀಡಿ, ಮಧ್ಯಂತರ ಆದೇಶ ಹೊರಡಿಸಿದ ಸುಪ್ರೀಂ.

ಅರಮನೆ ಮೈದಾನದ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿ ಹೀಗಿದೆ:
* ಅರಮನೆ ಮೈದಾನವನ್ನು ರಾಜಕೀಯ ಸಭೆಗಳಿಗೆ ನೀಡಬಾರದು.
* ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳಿಗೆ ಈ ಜಾಗವನ್ನು ಬಾಡಿಗೆಗೆ ನೀಡಬಾರದು.
* ನಿರ್ದಿಷ್ಟ ಅವಧಿಗೆ ಮಾತ್ರ ಗುತ್ತಿಗೆ ಅಥವಾ ಬಾಡಿಗೆಗೆ ಅರಮನೆ ಮೈದಾನದ 30 ಎಕರೆ ಪ್ರದೇಶವನ್ನು ಮಾತ್ರ ನೀಡಬಹುದು.
* ಕಾರ್ಯಕ್ರಮ ಆಯೋಜಿಸುವವರು ನಿಬಂಧನೆಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು.
* ಕಾರ್ಯಕ್ರಮವನ್ನು ಆರಂಭಿಸುವ 30 ದಿನದ ಮೊದಲೇ ಸರ್ಕಾರದಿಂದ ಅನುಮತಿ ಪಡೆಯಬೇಕು.
* ಕಾರ್ಯಕ್ರಮ ಮುಗಿದ ತಕ್ಷಣ, ತಾತ್ಕಾಲಿಕವಾಗಿ ನಿರ್ಮಿಸಿದ ಎಲ್ಲವನ್ನೂ ತೆಗೆದುಹಾಕಬೇಕು.
* ಮೈದಾನದಲ್ಲಿರುವ ಯಾವುದೇ ಮರ ಕಡಿಯುವಂತಿಲ್ಲ.

Story first published: Friday, August 03, 2012, 10:20 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS