ಬ್ಯಾಡ್ಮಿಂಟನ್‌ನಲ್ಲಿ ವಿಜಯದ ಸವಿ ಕಂಡ ಕಶ್ಯಪ್

Posted by:
Published: Saturday, July 28, 2012, 16:49 [IST]

Badminton: India's Kashyap wins first match
ಲಂಡನ್, ಜು. 28 : ಲಂಡನ್ ಒಲಿಂಪಿಕ್ಸ್ 2012ರಲ್ಲಿ ಭಾರತ ಮೊತ್ತಮೊದಲ ಜಯದ ಸವಿಯನ್ನು ಉಂಡಿದೆ. ಬ್ಯಾಂಡ್ಮಿಂಟನ್ ಆಟಗಾರ ಪಿ ಕಶ್ಯಪ್ ಅವರು, ಶನಿವಾರ ವೆಂಬ್ಲಿ ಅರೀನಾದಲ್ಲಿ ಗ್ರೂಪ್ ಹಂತದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬೆಲ್ಜಿಯಂನ ತಾನ್ ಯುಹನ್ ಅವರನ್ನು ನೇರ ಸೆಟ್‌ನಲ್ಲಿ ಸೋಲಿಸಿದ್ದಾರೆ.

21-14, 21-12 ಅಂತರದಿಂದ ತಾನ್ ಅವರನ್ನು ನೇರ ಸೆಟ್‌ನಲ್ಲಿ ಕಶ್ಯಪ್ ಸೋಲಿಸಿದರು. ಈ ಪಂದ್ಯ ಗೆಲ್ಲಲು ಅವರು ತೆಗೆದುಕೊಂಡಿದ್ದು ಕೇವಲ 35 ನಿಮಿಷಗಳು ಮಾತ್ರ. ಮುಂದಿನ ಪಂದ್ಯವನ್ನು ವಿಯೆಟ್ನಾಂನ ನ್ಯೂಯೆನ್ ತೀನ್ ಮಿನ್ಹ್ ಅವರನ್ನು ಕಶ್ಯಪ್ ಅವರು ಎದುರಿಸಲಿದ್ದಾರೆ.

ಬ್ಯಾಂಡ್ಮಿಂಟನ್‌ನ ಮಿಕ್ಸ್ಡ್ ಡಬಲ್ಸ್ ವಿಭಾಗದಲ್ಲಿ ಭಾರತದ ಜ್ವಾಲಾ ಗುಟ್ಟಾ ಮತ್ತು ವಿ ಡಿಜು ಅವರು ಮೊದಲ ಸುತ್ತಿನಲ್ಲಿಯೇ ಸೋತಿದ್ದ ನಿರಾಶೆಯನ್ನು ಕಶ್ಯಪ್ ಅವರು ತಮ್ಮ ಮೊದಲ ಪಂದ್ಯ ಗೆಲ್ಲುವ ಮುಖಾಂತರ ಅಲ್ಪಮಟ್ಟಿಗೆ ನಿವಾರಿಸಿದ್ದಾರೆ. ಪುರುಷರ ವಿಭಾಗದಲ್ಲಿ ಒಟ್ಟು 16 ಗ್ರೂಪ್‌ಗಳಿದ್ದು ಕಶ್ಯಪ್ ಅವರು ಗ್ರೂಪ್ 'ಡಿ'ನಲ್ಲಿದ್ದಾರೆ. ಆಯಾ ಗ್ರೂಪ್‌ನಲ್ಲಿ ಅಗ್ರಸ್ಥಾನ ಪಡೆದವರು ನಾಕೌಟ್ ಸುತ್ತಿಗೆ ಪ್ರವೇಶ ಪಡೆಯಲಿದ್ದಾರೆ.

ಜ್ವಾಲಾ ಮತ್ತು ಡಿಜುಗೆ ಸೋಲು : ಬ್ಯಾಡ್ಮಿಂಟನ್‌ನಲ್ಲಿ ಭಾರತದ ಮೊದಲ ಅಭಿಯಾನ ಆರಂಭಿಸಿದ್ದ ಜ್ವಾಲಾ ಗುಟ್ಟಾ ಮತ್ತು ವಿ ಡಿಜು ಅವರ ಜೋಡಿ ಮಿಕ್ಸ್ಡ್ ಡಬಲ್ಸ್ ವಿಭಾಗದಲ್ಲಿ ಇಂಡೋನೇಷ್ಯಾದ ತೊನ್ವೊಯ್ ಅಹ್ಮದ್ ಮತ್ತು ಲಿಲಿಯಾನಾ ನಾಸಿರ್ ಅವರ ಜೋಡಿಯೆದಿರು ನಿರಾಯಾಸ ಸೋಲನ್ನು ಕಂಡಿತು.

21-16, 21-12 ನೇರ ಸೆಟ್‌ನಲ್ಲಿ ಗುಟ್ಟಾ ಮತ್ತು ಡಿಜು ಜೋಡಿ ಯಾವುದೇ ಪ್ರತಿರೋಧ ಒಡ್ಡದೆ ಇಂಡೋನೇಷ್ಯಾ ಜೋಡಿಯೆದಿರು ಕೇವಲ 25 ನಿಮಿಷಗಳಲ್ಲಿ ಶರಣಾಯಿತು. ಇಂದಿನ ಮತ್ತೊಂದು ಪಂದ್ಯದಲ್ಲಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತದ ಅತ್ಯುತ್ತಮ ಡಬಲ್ಸ್ ಆಟಗಾರ್ತಿಯಾಗಿರುವ ಜ್ವಾಲಾ ಗುಟ್ಟಾ ಮತ್ತು ಕರ್ನಾಟಕದ ಅಶ್ವಿನಿ ಪೊನ್ನಪ್ಪ ಜೋಡಿ ಜಪಾನ್ ದೇಶದ ರೀಕಾ ಕಕೀವಾ ಮತ್ತು ಮಿಜುಕಿ ಫುಜಿ ಜೋಡಿಯನ್ನು ಎದುರಿಸಲಿದೆ.

Story first published: Saturday, July 28, 2012, 16:49 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS