ಬಿಎಸ್‌ವೈ ಜೈಲಿಗೆ ಹೋಗುವವರೆಗೆ ರಾಜ್ಯಾಧ್ಯಕ್ಷ ಬದಲಿಲ್ಲ

Posted by:
Published: Friday, July 27, 2012, 10:44 [IST]

bjp-president-high-command-waits-yeddyurappa-to-go-jail
ಬೆಂಗಳೂರು, ಜುಲೈ 27: ಇದು ರಾಜ್ಯ ಬಿಜೆಪಿಯ ಹಾಲಿ ಪರಿಸ್ಥಿತಿ. ಅತ್ಲಾಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಿಬಿಐ ಪಾಲಾಗಲಿ. ಆಗ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಾಯಿಸೋಣ. ಅದುವರೆಗೂ ಜೇನುಗೂಡಿಗೆ ಕೈಹಾಕುವುದು ಬೇಡ ಎಂದು ಹಾಲಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಸೇರಿದಂತೆ ಸಮಸ್ತ ಯಡ್ಡಿ ವಿರೋಧಿ ಪಡೆ ಕೈಕಟ್ಟಿ ಕುಳಿತಿದೆ.

ಸದ್ಯಕ್ಕೆ ಈಶ್ವರಪ್ಪನೋರು ಎರಡೆರಡು ಕುರ್ಚಿಗಳನ್ನು ಸಂಭಾಳಿಸುತ್ತಿದ್ದಾರಾದರೂ ಯಾವಾಗ ಅಪಾಯ ಎದುರಾಗುತ್ತಾದೋ ಎಂಬ ಭೀತಿಯಲ್ಲೇ ಇದ್ದಾರೆ. ಆದರೆ ಪಕ್ಷದ ರಾಷ್ಟ್ರೀಯ ವರಿಷ್ಠರೂ ಸಹ ಅನಿವಾರ್ಯವಾಗಿ ಮೌನಕ್ಕೆ ಶರಣಾಗಿದ್ದಾರೆ. ಹಾಗೆ ನೋಡಿದರೆ ವರಿಷ್ಠರು ಇಂತಹ ತಂತ್ರಕ್ಕೆ ಶರಣಾಗಿದ್ದು ಇದೇ ಮೊದಲಲ್ಲ. ಈ ಹಿಂದೆ ಯಡಿಯೂರಪ್ಪ ಗುಮ್ಮ ಎದುರಾದಾಗಲೆಲ್ಲ ಅವರ ಹಿಂದೆ ಕೋರ್ಟ್/ ಜೈಲು ಗುಮ್ಮವನ್ನು ಬಿಟ್ಟಿದ್ದಾರೆ. ಆದರೆ ಅದು ಅಷ್ಟೊಂದು ಯಶಸ್ವಿಯಾಗಿಲ್ಲ.

ಹಾಗಾಗಿ, ಈಗ ಮತ್ತೆ ಯಡಿಯೂರಪ್ಪ ಕಾಟ ಯಾವಾಗ ಬೇಕಾದರೂ ಕಾಡಬಹುದು ಎಂಬ ಆತಂಕ ಪಕ್ಷದ್ದಾಗಿದೆ. ಯಾವುದೇ ಕ್ಷಣ ಈಶ್ವರಪ್ಪ ತೊರೆಯಬಹುದಾದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿರಾಜಮಾನರಾಗಲು ಅನೇಕ ಹೆಸರುಗಳು ಸುಳಿದಾಡುತ್ತಿವೆ. ಎರಡೂ ಬಣಗಳು ತಮ್ಮ ತಮ್ಮ ಅಭ್ಯರ್ಥಿಯ ಹೆಸರುಗಳನ್ನು ತೇಲಿಬಿಟ್ಟಿವೆ. ಅಂತಿಮವಾಗಿ, ಯಡಿಯೂರಪ್ಪ ಮತ್ತು ಸದಾನಂದ ಗೌಡರ ಹೆಸರುಗಳು ಕಣದಲ್ಲಿ ಉಳಿದುಹೋಗುವ ಲಕ್ಷಣಗಳಿವೆ. ಮತ್ತು ವರಿಷ್ಠರಿಗೆ ಇದೇ ಆತಂಕಕಾರಿಯಾಗಿರುವುದು.

ಯಾವುದೇ ಒಂದು ಹೆಸರನ್ನು ಮುಂದಿಟ್ಟರೂ ಮತ್ತೊಂದು ಗುಂಪು ಎದ್ದುಕುಳಿತುಕೊಳ್ಳಲಿದೆ. ಆದರೆ ಚುನಾವಣೆ ಕಾಲೇ ಮತ್ತೊಂದು ಬಂಡಾಯವನ್ನು ಎದರಿಸುವ ಶಕ್ತಿ ಪಕ್ಷಕ್ಕಿಲ್ಲ. ಆದ್ದರಿಂದ ವರಿಷ್ಠರು ಯಡಿಯೂರಪ್ನೋರನ್ನ ಸಿಬಿಐ ಕರೆದುಕೊಂಡು ಹೋದರೆ ಹೇಗೆ ಎಂದು crossed fingers ನೊಂದಿಗೆ ಕುಳಿತಿದೆ.

ರಾಜ್ಯಾಧ್ಯಕ್ಷರ ನೇಮಕದಲ್ಲಿ ಅಕಸ್ಮಾತ್ ಯಡಿಯೂರಪ್ಪನವರು ಸಿಟ್ಟಿಗೆದ್ದು ಒಂದಷ್ಟು ಶಾಸಕರೊಂದಿಗೆ ಪೇರಿ ಕಿತ್ತಿದರೆ ಪಕ್ಷಕ್ಕೆ ಆಘಾತವಾಗುವುದು ನಿಶ್ಚಿತ. ಅದರಲ್ಲೂ ವೀರಶೈವರು ಯಡಿಯೂರಪ್ಪನವರನ್ನೇ ಇನ್ನೂ ತಮ್ಮ ನಾಯಕ ಎಂದು ಹೇಳುತ್ತಿರುವಾಗ ...

ಒಂದುವೇಳೆ ಯಡಿಯೂರಪ್ಪನವರು ಸಿಬಿಐ ವಶವಾದರೆ ಅವರ ಅನುಪಸ್ಥಿತಿಯಲ್ಲಿ ಯಾರೂ ಬಂಡಾಯವೇಳುವ ಧೈರ್ಯ ತೋರುವುದಿಲ್ಲ. ಾಗ ರಾಜ್ಯಾಧ್ಯಕ್ಷ ಸ್ಥಾನ ತುಂಬುವುದು ಸಲೀಸಾದೀತು ಎಂಬುದು ವರಿಷ್ಠರ ಧೈರ್ಯ ಎಂದು ಬಿಜೆಪಿ ಮೂಲಗಳು ಪಿಸುಗುಟ್ಟುತ್ತಿವೆ.

Story first published: Friday, July 27, 2012, 10:44 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS