ಭಾರತದ ರೈಲುಗಳು ವಿಶ್ವದ ದೊಡ್ಡ ಟಾಯ್ಲೆಟ್ಟುಗಳು

Posted by:
Updated: Saturday, July 28, 2012, 7:20 [IST]

ನವದೆಹಲಿ, ಜುಲೈ 27: 'ಭಾರತೀಯ ರೈಲ್ವೆಯು ವಿಶ್ವದ ಅತಿ ದೊಡ್ಡ ಪಾಯಖಾನೆ' ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಸಚಿವ ಜೈರಾಂ ರಮೇಶ್ ಬಣ್ಣಿಸಿದ್ದಾರೆ.

new-delhi-world-biggest-toilet-indian-railways

'ಭಾರತವು ಬಯಲು ಪಾಯಖಾನೆಗೆ ತೊಟ್ಟಿಲು ಇದ್ದಂತೆ. ಇದು ನಿಜಕ್ಕೂ ಅಸಹ್ಯದ, ನಾಚಿಕೆಯ, ದುಃಖದಾಯಕ ಮತ್ತು ರೋಷದ ವಿಷಯವಾಗಿದೆ' ಎಂದು ಕಟುವಾಸ್ತವದ ಬಗ್ಗೆ ಆಗಾಗ ವಿಶಿಷ್ಟ, ವಿವಾದಾತ್ಮಕ ವ್ಯಾಖ್ಯಾನಗಳನ್ನು ನೀಡುವ ಸಚಿವ ಜೈರಾಂ ರಮೇಶ್ ಶುಕ್ರವಾರ ಹೇಳಿದ್ದಾರೆ. ಮುಂದಿನ 5 ವರ್ಷಗಳಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ರೈಲ್ವೆಯ 50,000 ಕೋಚ್ ಗಳಲ್ಲಿ ಪರಿಸರ-ಸ್ನೇಹಿ ಜೈವಿಕ ಟಾಯ್ಲೆಟ್ಟುಗಳನ್ನು ಸ್ಥಾಪಿಸುವುದಾಗಿಯೂ ಸಚಿವ ರಮೇಶ್ ಹೇಳಿದ್ದಾರೆ.

ರೈಲ್ವೆ- ಬೃಹತ್ತಾದ ಮೊಬೈಲ್ ಪಾಯಖಾನೆ: ಪರಿಸರ-ಸ್ನೇಹಿ ಟಾಯ್ಲೆಟ್ಟುಗಳ ಬಗ್ಗೆ ಒಡಂಬಡಿಕೆಗೆ ಸಹಿ ಹಾಕಿದ ಸಂದರ್ಭದಲ್ಲಿ ಭಾರತದ ಪಾಯಖಾನೆಗಳ ಸ್ಥಿತಿಗತಿಗಳ ಬಗ್ಗೆ ಅವರು ಈ ಷರಾ ಬರೆದರು. 'ಭಾರತದಲ್ಲಿ ನೈಮರ್ಲೀಕರಣ ಸಮಸ್ಯೆ ಸೃಷ್ಟಿಸುವ ಅತಿ ದೊಡ್ಡ ತಾಣ ಇದಾಗಿದೆ. ನಿಜಕ್ಕೂ ಇದು ವಿಶ್ವದ ಅತಿ ದೊಡ್ಡ 'ಬಯಲು ಪಾಯಖಾನೆ' ಆಗಿದೆ. 11 ದಶಲಕ್ಷ ಪ್ರಯಾಣಿಕರನ್ನು ಹೊತ್ತು ಸಂಚರಿಸುವ ಈ ಮೊಬೈಲ್ ಪಾಯಖಾನೆ ಬಗ್ಗೆ ನಮಗೆಲ್ಲ ಚೆನ್ನಾಗಿ ಗೊತ್ತು' ಎಂದು ಅವರು ವಿಮರ್ಶಿಸಿದರು.

'ಭಾರತದಲ್ಲಿ ಶೇ. 60ರಷ್ಟು ಬಯಲು ಪಾಯಖಾನೆ ನಡೆಯುತ್ತದೆ. ಹೆಚ್ಚು ಹೆಚ್ಚು ಜೈವಿಕ ಟಾಯ್ಲೆಟ್ಟುಗಳನ್ನು ಬಳಸುವುದಕ್ಕೆ ನಾವು ಒತ್ತು ನೀಡಬೇಕಾಗಿದೆ. ಮುಂದಿನ 2 ವರ್ಷಗಳಲ್ಲಿ ಹಿಂದುಳಿದ 300 ಗ್ರಾಮ ಪಂಚಾಯತ್ ಗಳಲ್ಲಿ 1 ಲಕ್ಷ ಜೈವಿಕ ಟಾಯ್ಲೆಟ್ಟುಗಳನ್ನು ಸ್ಥಾಪಿಸಲಾಗುವುದು. ಈ ಮಹತ್ಕಾರ್ಯಕ್ಕೆ 150 ಕೋಟಿ ರೂ. ಸುರಿಯಲಾಗುವುದು' ಎಂದು ಸಚಿವ ರಮೇಶ್ ಇದೇ ವೇಳೆ ಪ್ರಕಟಿಸಿದರು.

ಸದ್ಯಕ್ಕೆ 436 ಕೋಚ್ ಗಳಲ್ಲಿ ಜೈವಿಕ ಟಾಯ್ಲೆಟ್ಟುಗಳನ್ನು ಅಳವಡಿಸಲಾಗಿದೆ. ವಾರ್ಷಿಕ 4,000 ಕೋಚ್ ಗಳನ್ನು ಹೊಸದಾಗಿ ತಯಾರಿಸಲಾಗುತ್ತಿದೆ. ಅವುಗಳಿಗೆಲ್ಲ ಜೈವಿಕ ಟಾಯ್ಲೆಟ್ಟುಗಳನ್ನು ಕಡ್ಡಾಯವಾಗಿ ತೊಡಿಸಲಾಗುವುದು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ DRDO ಇದನ್ನು ಅಭಿವದ್ಧಿಪಡಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.

Story first published: Friday, July 27, 2012, 14:25 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS