ರಾಜ್ಯಕ್ಕೆ ಇಬ್ಬರು ಡೆಪ್ಯುಟಿಗಳು; ಅಶೋಕ್, ಈಶ್ವರಪ್ಪ!

Posted by:
Updated: Friday, July 13, 2012, 9:04 [IST]

r-ashok-ks-eshwarappa-new-dcm-for-karnataka
ಬೆಂಗಳೂರು, ಜುಲೈ 10: ಹೌದು, ರಾಜ್ಯಕ್ಕೆ ಇನ್ನು ಇಬ್ಬರು ಉಪ ಮುಖ್ಯಮಂತ್ರಿಗಳು. ಒಬ್ಬರು ಸನ್ಮಾನ್ಯ ಆರ್. ಅಶೋಕ್ ಮತ್ತೊಬ್ಬರು ಮತ್ತೊಬ್ಬ ಸನ್ಮಾನ್ಯ ಕೆ.ಎಸ್. ಈಶ್ವರಪ್ಪ! ಅನುಕ್ರಮವಾಗಿ ಒಬ್ಬರು ಒಕ್ಕಲಿಗ ಸಮುದಾಯದವರಾಗಿದ್ದರೆ ಮತ್ತೊಬ್ಬರು ಹಿಂದುಳಿದ ಕುರುಬ ಜನಾಂಗದವರು.

ಇದು ಬೆಳಗ್ಗೆಯಿಂದ ಹಾದಿಬೀದಿ ಜಗಳದಲ್ಲಿ ತೊಡಗಿದ್ದ ರಾಜ್ಯ ಬಿಜೆಪಿ ಬಣಗಳನ್ನು ಸಂತೃಪ್ತಗೊಳಿಸಲು ದಿಲ್ಲಿ ವರಿಷ್ಠರು ಕಂಡುಕೊಂಡ LKG formula ಇದು! ಅಂದರೆ Lಲಿಂಗಾಯತ, Kಕುರುಬ ಮತ್ತು Gಗೌಡ ಸಮೀಕರಣ ಇದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಆದರೆ ರಾಜ್ಯಾಧ್ಯಕ್ಷ ಸ್ಥಾನವನ್ನು ತಕ್ಷಣ ಭರ್ತಿ ಮಾಡಬೇಕು. ಮತ್ತು ಆ ಸ್ಥಾನಕ್ಕೆ ಸದಾನಂದ ಗೌಡ ಅವರನ್ನೇ ನೇಮಿಸಬೇಕು. ಇದನ್ನು ತಕ್ಷಣ ಘೋಷಣೆ ಮಾಡಲೇಬೇಕು. ಇಲ್ಲವಾದಲ್ಲಿ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಜತೆಗೆ ಸಚಿವರ ಹೆಸರುಗಳನ್ನೂ ಪ್ರಕಟಿಸಬೇಕು ಎಂದು ಸದಾನಂದ ಗೌಡರ ಬಣದವರು ಪಟ್ಟುಹಿಡಿದಿದ್ದಾರೆ. ಆದರೆ ಯಡಿಯೂರಪ್ಪ ಬಣ ಇದಕ್ಕೆ ಸಮ್ಮತಿ ನೀಡಿದೆಯಾ? ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. 

ಹೀಗೆ ಒಂದೊಂದೇ ಬೇಡಿಕೆಯನ್ನು ಮುಂದೊಡ್ಡುತ್ತಿರುವುದರಿಂದ ಬಿಜೆಪಿ ವರಿಷ್ಠರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಯಾವುದೇ ನಿರ್ಧಾರಕ್ಕೆ ಬಾರದೆ ತೊಳಲಾಡುತ್ತಿದ್ದಾರೆ.

ಈ ಮಧ್ಯೆ, ಒಬ್ನನಿಗೇ ನೆಟ್ಟಗೆ ಆಡಳಿತ ನಡೆಸೋಕ್ಕೆ ಅವಕಾಶ ನೀಡದವರು ಈಗ ಜತೆಗಿರಲಿ ಎಂದು ಮತ್ತಿಬ್ಬರನ್ನು ಪಕ್ಕದಲ್ಲಿ ಕೂಡಿಸಿಕೊಂಡಿದ್ದಾರೆ. ಇನ್ನು ಕರ್ನಾಟಕದ ಕಥೆ ಮುಗಿಯಿತು ಎಂದು ಜನ ಆಕ್ರೋಶಭರಿತರಾಗಿದ್ದಾರೆ.

ಶಿಸ್ತಿನ ಪಕ್ಷ ಎಂದೇ ಲೋಕ ವಿಖ್ಯಾತವಾದ ಬಿಜೆಪಿ ತನ್ನದೇ ಶಿಸ್ತಿಗೆ ಕಟ್ಟುಬಿದ್ದು ಇದುವರೆಗೂ ತನ್ನಾಳ್ವಿಕೆಯ ಯಾವುದೇ ರಾಜ್ಯದಲ್ಲಿ ಎಂಥಹುದೇ ಸಂದಿಗ್ಧ ಪರಿಸ್ಥಿತಿ ಎದುರಾದರೂ ಉಪ ಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸಿರಲಿಲ್ಲ. ಆದರೆ ಕರ್ನಾಟಕದ ಬಿಜೆಪಿ ನಾಯಕರು ಪಕ್ಷದ ಶಿಸ್ತನ್ನು ಮಣ್ಣುಪಾಲು ಮಾಡಿದ್ದು, ಒಬ್ಬರಲ್ಲ; ಇಬ್ಬರು ಉಪ ಮುಖ್ಯಮಂತ್ರಿಗಳ ಸೃಷ್ಟಿಗೆ ಕಾರಣೀ'ಭೂತ'ರಾಗಿದ್ದಾರೆ.

Story first published: Tuesday, July 10, 2012, 14:59 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS