ಅತ್ಯಾಚಾರ, ಅಪಹರಣ ಪ್ರಕರಣ ಆಧಾರರಹಿತ: ರಾಹುಲ್

Posted by:
Updated: Monday, July 9, 2012, 8:10 [IST]

charges-of-sexual-assault-false-rahul-gandhi-sc
ನವದೆಹಲಿ, ಜುಲೈ 7: ನನ್ನ ವಿರುದ್ಧದ ಅತ್ಯಾಚಾರ ಮತ್ತು ಅಪಹರಣದ ದೂರು ಆಧಾರರಹಿತ. ಮತ್ತು ಅದರಿಂದ ನನ್ನ ತೇಜೋವಧೆಯಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ತಾವು ಪ್ರತಿನಿಧಿಸುವ ಅಮೇಠಿ ಕ್ಷೇತ್ರದ ಒಬ್ಬ ಯುವತಿಯನ್ನು ತಾವು ಅಪಹರಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಸಮಾಜವಾದಿ ಪಕ್ಷದ ಶಾಸಕರು ದೂರಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ರಾಹುಲ್ ಗಾಂಧಿ ಅವರು ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್ ಗಮನ ಸೆಳೆದಿದ್ದಾರೆ.

2011ರ ಏಪ್ರಿಲ್ 6ರಂದು ಸುಪ್ರೀಂ ಕೋರ್ಟ್ ನೀಡಿದ್ದ ನೋಟಿಸ್ ಗೆ ಉತ್ತರವಾಗಿ ರಾಹುಲ್ ಗಾಂಧಿ ಅವರು ನ್ಯಾ ಎಚ್ಎಲ್ ದತ್ತು ಮತ್ತು ಸಿಕೆ ಪ್ರಸಾದ್ ಅವರ ಸುಪ್ರೀಂ ನ್ಯಾಯಪೀಠಕ್ಕೆ ಶುಕ್ರವಾರ ಈ ಅಫಿಡವಿಟ್ ಸಲ್ಲಿಸಿದ್ದಾರೆ.

ಅಲಹಾಬಾದ್ ಹೈಕೋರ್ಟಿನಲ್ಲಿ ಮಧ್ಯಪ್ರದೇಶದ ಕಿಶೋರ್ ಸಮ್ರಿತ್ ಎಂಬ ಮಾಜಿ ಶಾಸಕ ರಾಹುಲ್ ವಿರುದ್ಧ ಈ ಸಂಬಂಧ ದೂರಿದ್ದಾರೆ. ರಾಹುಲ್ ಗಾಂಧಿ ಮತ್ತು ಆತನ ಕೆಲವು ವಿದೇಶಿ ಗೆಳೆಯರು ಸುಕನ್ಯ ಸಿಂಗ್ ಎಂಬ 24 ವರ್ಷದ ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಆನಂತರ ಕೆಲವು ವಾರಗಳ ಬಳಿಕ ಸುಕನ್ಯ ಮತ್ತು ಆಕೆಯ ಪೋಷಕರು 2007ರ ಜನವರಿಯಿಂದ ಕಾಣೆಯಾಗಿದ್ದಾರೆ.

ನನಗೆ ಈ ವಿಷಯ ತಿಳಿದುಬರುತ್ತಿದ್ದಂತೆ ಅಮೇಠಿಯಲ್ಲಿರುವ ಸುಕನ್ಯಾರ ಮನೆಗೆ ನಾನು ಹೋಗಿದ್ದೆ. ಆದರೆ ಆ ಮನೆಗೆ ಬೀಗ ಹಾಕಲಾಗಿತ್ತು. ಅಕ್ಕಪಕ್ಕದವರು ಈ ಬಗ್ಗೆ ಮಾತನಾಡಲು ಹಿಂಜರಿದರು ಎಂದು ಶಾಸಕ ಕಿಶೋರ್ ಕೋರ್ಟಿಗೆ ತಿಳಿಸಿದ್ದರು. ದೂರುದಾರ ಮಾಜಿ ಶಾಸಕ ಕಿಶೋರ್ ಪ್ರಕಾರ ಕಾಂಗ್ರೆಸ್ ನಾಯಕ ರಾಹುಲ್ ಇಡೀ ಕುಟುಂಬವನ್ನು ಅಪಹರಿಸಿದ್ದಾರೆ.

ಸುಕನ್ಯ ಮತ್ತು ಆಕೆಯ ಪೋಷಕರು ಕಾಣೆಯಾಗಿರುವ ಬಗ್ಗೆ ಶಾಸಕ ಕಿಶೋರ್ ಅವರು ಅಲಹಾಬಾದ್ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಅಲಹಾಬಾದ್ ಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿತ್ತು. ಜತೆಗೆ, ಅರ್ಜಿದಾರನಿಗೆ (ಮಾಜಿ ಶಾಸಕ ಕಿಶೋರ್) 50 ಲಕ್ಷ ರುಪಾಯಿ ದಂಡವನ್ನು ವಿಧಿಸಿ, ರಾಹುಲ್ ಗಾಂಧಿಯ ಹೆಸರಿಗೆ ಕಳಂಕ ತರಲು ಉದ್ದೇಶಪೂರ್ವಕವಾಗಿ ಈ ದೂರು ಸಲ್ಲಿಸಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120B, 181, 211 ಮತ್ತು 499-500 ಅನುಸಾರ ದೂರುದಾರ ಮಾಜಿ ಶಾಸಕ ಕಿಶೋರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ ತನಿಖೆಗೆ ಮುಂದಾಯಿತು. ತಕ್ಷಣ ದೂರುದಾರ ಮಾಜಿ ಶಾಸಕ ಕಿಶೋರ್ ಸುಪ್ರೀಂ ಕೋರ್ಟಿನ ಮೊರೆಹೋದರು.

ಮಾಜಿ ಶಾಸಕ ಕಿಶೋರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಸಿಬಿಐ ತನಿಖೆ ನಡೆಸುವುದಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರಕಾರ ಮತ್ತು ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿತ್ತು.

ಇದಕ್ಕೆ ಉತ್ತರವಾಗಿ, 'ನನ್ನ ವಿರುದ್ಧದ ಅತ್ಯಾಚಾರ ಮತ್ತು ಅಪಹರಣದ ದೂರು ಆಧಾರರಹಿತ. ಮತ್ತು ಅದರಿಂದ ನನ್ನ ತೇಜೋವಧೆಯಾಗುತ್ತಿದೆ' ಎಂದು ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಅವರು ಕೌಂಟರ್ ಅಫಿಡವಿಟ್ ಸಲ್ಲಿಸಿದರು.

Story first published: Saturday, July 07, 2012, 13:42 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS