ಸ್ವಾಮಿ ನಿತ್ಯಾನಂದನನ್ನು ಗಡಿಪಾರು ಮಾಡಬೇಕೆ?

Posted by:
Published: Friday, June 8, 2012, 15:46 [IST]

Should Nithyananda be kicked out of Karnataka?
ಬೆಂಗಳೂರು, ಜೂ. 8 : ತಾನೇ ಕರೆದಿದ್ದ ಪತ್ರಿಕಾಗೋಷ್ಠಿಯಿಂದ ಸುವರ್ಣ ಸುದ್ದಿ ವಾಹಿನಿಯ ಪತ್ರಕರ್ತನನ್ನು ಹೊರಹಾಕಿದ ಬಿಡದಿ ಧ್ಯಾನಪೀಠಂನ ಸ್ವಾಮಿ ನಿತ್ಯಾನಂದನ ವಿರುದ್ಧ ರಾಜ್ಯಾದ್ಯಂತ ನಾಗರಿಕರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಹುಬ್ಬಳ್ಳಿ, ಯಾದಗಿರಿ, ಗುಲಬರ್ಗ ಮುಂತಾದೆಡೆಗಳಲ್ಲಿ ನಿತ್ಯಾನಂದನ ವಿರುದ್ಧ ಮಾತ್ರವಲ್ಲ, ಕೈಕಟ್ಟಿ ಕುಳಿತಿರುವ ರಾಜ್ಯ ಸರಕಾರದ ವಿರುದ್ಧ ಜನ ತಿರುಗಿನಿಂತಿದ್ದಾರೆ.

ಶುಕ್ರವಾರ ಮಧ್ಯಾಹ್ನ ನಿತ್ಯಾನಂದನಿಂದ ಧ್ಯಾನಪೀಠಂನಲ್ಲಿ ಮತ್ತೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಆಶ್ರಮಕ್ಕೆ ನುಗ್ಗಿದ ಕನ್ನಡಪರ ಹೋರಾಟಗಾರರು, ರೈತ ಸಂಘದ ಸದಸ್ಯರು ಮತ್ತು ನಿತ್ಯಾನಂದನ ಶಿಷ್ಯಂದಿರ ನಡುವೆ ಮಾರಾಮಾರಿ ಕೂಡ ನಡೆದಿದೆ. ಆ ಗಲಾಟೆಯಲ್ಲಿ ಕನ್ನಡಪರ ಹೋರಾಟಗಾರನ ಕೈಯನ್ನು ಕೂಡ ಮುರಿಯಲಾಗಿದೆ. ಕನ್ನಡ ಹೋರಾಟಗಾರರು ಕೂಡ ನಿತ್ಯಾನಂದ ಶಿಷ್ಯಂದಿರಿಗೆ ಲಾಠಿಯಿಂದ ಪ್ರಹಾರ ಮಾಡಲು ಯತ್ನಿಸಿದ್ದಾರೆ.

ಕನ್ನಡ ಹೋರಾಟಗಾರರು ಆಶ್ರಮಕ್ಕೆ ನುಗ್ಗಿದಾಗ ಅವರ ವಿರುದ್ಧ ಆಶ್ರಮದ ಸನ್ಯಾಸಿನಿಯರು ಮತ್ತೆ ಗಂಟಲು ಹರಿದುಕೊಂಡಿದ್ದಾರೆ. ರಣಚಂಡಿಯರಂತೆ ವರ್ತಿಸುತ್ತ ಸನ್ಯಾಸಿನಿಯರು ಕನ್ನಡದ ಒಂದೂ ಪದಗಳನ್ನು ಆಡದೆ ಆಂಗ್ಲ ಮತ್ತು ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರಿಂದ ಕನ್ನಡ ಹೋರಾಟಗಾರರ ಆಕ್ರೋಶ ಇನ್ನಷ್ಟು ಹೆಚ್ಚಿತು. ಒಂದಕ್ಷರವೂ ಕನ್ನಡ ಮಾತನಾಡದ ಇಂಥವರಿಗೆ ಕನ್ನಡ ನಾಡಿನಲ್ಲಿ ಜಾಗ ಕೊಟ್ಟಿದ್ದೇಕೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಬ್ರಹ್ಮಚಾರಿಣಿ ಮತ್ತು ಸನ್ಯಾಸಿನಿಯ ಮೇಲೆ ಕೈ ಎತ್ತಿದ ಮತ್ತು ಅಸಭ್ಯವಾಗಿ ವರ್ತಿಸಿದ ಅವರನ್ನು ಬಿಡಬೇಡಿ, ಹೊಡೆಯಿರಿ, ಬಡಿಯಿರಿ ಎಂಬ ಆಕ್ರೋಶದ ಮಾತುಗಳು ಸನ್ಯಾಸಿನಿಯರಿಂದ ಕೇಳಿಬಂದವು. ಪೊಲೀಸರು ಮಧ್ಯ ಪ್ರವೇಶಿಸಿದರೂ ನಿತ್ಯಾನಂದನ ಶಿಷ್ಯಂದಿರನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಅಲ್ಲದೆ, ಆಶ್ರಮದ ಗೇಟನ್ನು ಬಂದ್ ಮಾಡಲಾಗಿದ್ದು, ಯಾರನ್ನೂ ಒಳಗಡೆ ಬಿಡುತ್ತಿಲ್ಲ. ನೂರಾರು ಸಂಖ್ಯೆಯಲ್ಲಿ ಕನ್ನಡಪರ ಹೋರಾಟಗಾರರು ಆಶ್ರಮದ ಮುಂದೆ ಜಮಾಯಿಸಿದ್ದು ಗೇಟಿನ ಮುಂದಿದ್ದ ದೊಡ್ಡ ಹೋರ್ಡಿಂಗಿಗೆ ಬೆಂಕಿ ಹಚ್ಚಲು ಯತ್ನಿಸಿದರು. ಕನ್ನಡ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ಕೂಡ ಮಾಡಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿದರು.

ಗಡಿಪಾರು ಮಾಡಿ : ರಾಜ್ಯದ ವಿವಿಧೆಡೆ ಕನ್ನಡ ವಿರೋಧಿ ನಿತ್ಯಾನಂದನ ಆಟಾಟೋಪದ ವಿರುದ್ಧ ಜನ ದಂಗೆ ಎದ್ದಿದ್ದಾರೆ. ಕನ್ನಡ ನಾಡಿ ಪತ್ರಕರ್ತರನ್ನೇ ಅವಮಾನಿಸುತ್ತಿರುವ ತಮಿಳುನಾಡಿನಿಂದ ವಲಸೆ ಬಂದಿರುವ ನಿತ್ಯಾನಂದನನ್ನು ಕರ್ನಾಟಕ ಸರಕಾರ ಹೇಗೆ ಸಹಿಸಿಕೊಂಡಿದೆ, ಅವರಿಗೆ ಆಶ್ರಮ ಕಟ್ಟಿಕೊಳ್ಳಲು ಹೇಗೆ ಅವಕಾಶ ಮಾಡಿಕೊಟ್ಟಿದೆ? ಎಂದು ಕನ್ನಡ ಪ್ರೇಮಿಗಳು ಪ್ರಶ್ನಿಸಿದ್ದಾರೆ. ಈ ಕೂಡಲೆ ನಿತ್ಯಾನಂದ ಮತ್ತು ಅವರ ಗೂಂಡಾ ಸಹಚರರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ನಿತ್ಯಾನಂದನ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಅವರ ಪ್ರತಿಕೃತಿಗೆ ಬೆಂಕಿ ಹಚ್ಚಲಾಗಿದೆ.

ಜೂ.10ರಂದು ಭಾರೀ ಪ್ರತಿಭಟನೆ : ನಿತ್ಯಾನಂದನ ದಬ್ಬಾಳಿಕೆ ಮತ್ತು ಕನ್ನಡ ವಿರೋಧಿ ನಡವಳಿಕೆಯನ್ನು ವಿರೋಧಿಸಿ ಬಿಡದಿಯಲ್ಲಿರುವ ನಿತ್ಯಾನಂದನ ಧ್ಯಾನಪೀಠಂ ಆಶ್ರಮದ ಎದುರುಗಡೆ ಬೆಳಿಗ್ಗೆ 10 ಗಂಟೆಗೆ ಕನ್ನಡಪರ ಹೋರಾಟಗಾರರು ಭಾರೀ ಪ್ರತಿಭಟನೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಪ್ರತಿಭಟನೆ ನಡೆಯುವ ಮುನ್ನ ನಿತ್ಯಾನಂದನ ಆಶ್ರಮಕ್ಕೆ ಬೀಗ ಜಡಿಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅಷ್ಟರೊಳಗೆ ಸ್ವಾಮಿ ನಿತ್ಯಾನಂದ ತನ್ನ ಶಿಷ್ಯ ಬಳಗದೊಂದಿಗೆ ತಮಿಳುನಾಡಿಗೆ ಪರಾರಿಯಾದರೂ ಆಶ್ಚರ್ಯವಿಲ್ಲ.

Story first published: Friday, June 08, 2012, 15:46 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS