ಭದ್ರತಾ ತಪಾಸಣೆ ಪ್ರತಿಭಟಿಸಿ ಬೆತ್ತಲೋ ಬೆತ್ತಲು

Posted by:
Published: Thursday, April 19, 2012, 9:55 [IST]

portland-airport-man-naked-while-security-check
ವಾಷಿಂಗ್ಟನ್, ಏ.19: ಅಮೆರಿಕದ ವಿಮಾನ ನಿಲ್ದಾಣಗಳಲ್ಲಿನ Security Check up ತುಂಬಾನೆ ಕಟ್ಟುನಿಟ್ಟಾಗಿದೆ. ತಾಜಾ ಉದಾಹರಣೆ ಅಂದರೆ ಬಾಲಿವುಡ್ ಬಾದಷಾ ಶಾರುಕ್ ಖಾನ್ ಪ್ರಸಂಗ. ಒಟ್ಟಾರೆಯಾಗಿ ಕಠಿಣವಾಗಿರುವ ಇಂತಹ Check upಗಳ ವಿರುದ್ಧ ಜನರ ಅಸಹನೆಯೂ ಹೆಚ್ಚುತ್ತಿದೆ.

ಏನಾಯಿತೆಂದರೆ ಅಪಾದಮಸ್ತಕವಾಗಿ ಇಡೀ ಮೈಯನ್ನು ತಪಾಸಿಸುವ ಕ್ರಮದಿಂದ ರೊಚ್ಚಿಗೆದ್ದ ಪ್ರಯಾಣಿಕನೊಬ್ಬ ತನ್ನೆಲ್ಲ ಉಡುಪು ಕಳಚಿ ಈಗ ಏನು ಬೇಕಾದರೂ ತಪಾಸಣೆ ಮಾಡಿಕೊಳ್ಳಿ ಎಂಬಂತೆ ಗೊಮ್ಮಟೇಶ್ವರನಂತೆ ನಿಂತುಬಿಟ್ಟ. ಈ ಘಟನೆ ನಡೆದಿದ್ದು ಪೋರ್ಟ್‌ಲ್ಯಾಂಡ್‌ ಇಂಟರ್‌ನ್ಯಾಶನಲ್‌ ವಿಮಾನ ನಿಲ್ದಾಣದಲ್ಲಿ ಮಂಗಳವಾರ (ಏಪ್ರಿಲ್ 17). ಸದ್ಯ ಶಾರುಕ್ ಖಾನ್ ಬೆತ್ತಲಾಗದೆ ಮಾನ ಕಾಪಾಡಿದರು!

ಭದ್ರತಾ ತಪಾಸಣೆ ನೆಪದಲ್ಲಿ ಅಧಿಕಾರಿಗಳು ತನಗೆ ಕಿರುಕುಳ ನೀಡುತ್ತಿದ್ದಾರೆ ಎನಿಸಿತಂತೆ 50 ವರ್ಷದ ಜಾನ್‌ ಇ. ಬ್ರೆನ್ನನ್‌ಗೆ. ಅದು ತೋರಿಸು, ಇದು ತೋರಿಸು ಎನ್ನುವ ಅಧಿಕಾರಿಗಳ ಪೀಡೆಯೇ ಬೇಡ ಎಂದು ತಾನು ಸಂಪೂರ್ಣ ಬೆತ್ತಲಾಗಿ ಅವರೆದುರು ನಿಂತೆ ಎಂದು ಜಾಣ್ ಸಿಎನ್‌ಎನ್‌ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಓರೇಗಾನ್‌ ಪೊಲೀಸರು ಬ್ರೆನ್ನನ್‌ ವಿರುದ್ಧ ಅಶಿಸ್ತಿನ ನಡವಳಿಕೆಯ ಕೇಸು ದಾಖಲಿಸಿಕೊಂಡಿದ್ದಾರೆ.

ನಿನ್ನೆ ರಾತ್ರಿ ಸೆಕ್ಯುರಿಟಿ ಸ್ಕ್ರೀನಿಂಗ್‌ ಪ್ರದೇಶವನ್ನು ಹಾದು ಹೋಗುತ್ತಿದ್ದ ವೇಳೆ ಬ್ರೆನ್ನನ್‌ ತನ್ನ ಉಡುಪುಗಳನ್ನು ಕಳಚಿದಾಗ ಪ್ರಯಾಣಿಕರು ನಾಚಿಕೆಯಿಂದ ಮುಖ ಮುಚ್ಚಿಕೊಂಡರು ಹಾಗೂ ಮಕ್ಕಳ ಕಣ್ಣಿಗೆ ಕೈ ಅಡ್ಡ ಇಟ್ಟರು. ಆದರೆ ಕೆಲವರು ಬ್ರೆನ್ನನ್‌ ಪ್ರತಿಭಟನೆಯನ್ನು ಕ್ರೀಡಾಸ್ಪೂರ್ತಿಯಿಂದ ನೋಡಿದ್ದು ಮಾತ್ರವಲ್ಲದೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.  

ದೇಹದ ಸ್ಕ್ರೀನಿಂಗ್‌ ಮಾಡುವುದು ಒಂದು ರೀತಿಯ ಕಿರುಕುಳವಾಗಿರುವುದರಿಂದ ಇದನ್ನು ಪ್ರತಿಭಟಿಸಿ ಬೆತ್ತಲಾಗಿದ್ದೇನೆ ಎಂದು ಬ್ರೆನ್ನನ್‌ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಅವರು ಶರಾಬು ಅಥವಾ ಮಾದಕ ವಸ್ತುವಿನ ಅಮಲಿನಲ್ಲಿ ಈ ಕೃತ್ಯ ಎಸಗಿಲ್ಲ ಎಂದು ದೃಢಪಟ್ಟಿದೆ. ಪೋರ್ಟ್‌ಲ್ಯಾಂಡ್‌ನಿಂದ ಕ್ಯಾಲಿಫೋರ್ನಿಯದ ಸ್ಯಾನ್‌ ಜೋಸ್‌ಗೆ ಅಲಾಸ್ಕ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸಲು ಅವರು ವಿಮಾನ ನಿಲ್ದಾಣಕ್ಕೆ ಬಂದಿದ್ದರು.

Story first published: Thursday, April 19, 2012, 09:55 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS