ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಸೋಲು ನಿಶ್ಚಿತ

Posted by:
Published: Wednesday, March 14, 2012, 10:42 [IST]

Sunil Kumar & Pramod Mutalik
ಹುಬ್ಬಳ್ಳಿ, ಮಾ 14: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಈ ಹಿಂದೆ ಬಜರಂಗದಳದ ನಾಯಕರಗಿದ್ದರು. ಆ ಸಂಘಟನೆಯನ್ನು ನಾಶ ಮಾಡಿದವರು ಅವರೇ. ಈ ಚುನಾವಣೆಯಲ್ಲಿ ಸುನಿಲ್ ಕುಮಾರ್ ಸೋಲು ನಿಶ್ಚಿತ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

ಹಿಂದುತ್ವ ವಿರೋಧ ನೀತಿ ಅನುಸರಿಸುತ್ತಿರುವ ಅವರನ್ನು ಹಿಂದೂಗಳೇ ಸೋಲಿಸಲಿದ್ದಾರೆ. ಐದು ವರ್ಷ ಕಾಲ ಶಾಸಕರಾಗಿದ್ದರೂ ಒಮ್ಮೆಯೂ ದತ್ತಪೀಠದ ಬಗ್ಗೆ ಚಕಾರವೆತ್ತಲಿಲ್ಲ. ಅವರ ಈ ಹಿಂದೂ ವಿರೋಧಿ ಧೋರಣೆಯಿಂದಲೇ ಕಾರ್ಕಳ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅದು ಪುನಾರ್ವರ್ತನೆಯಾಗಲಿದೆ ಎಂದು ಮುತಾಲಿಕ್ ಭವಿಷ್ಯ ನುಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈ ಪ್ರಕರಣವನ್ನು ಸರಕಾರದ ಗಮನಕ್ಕೆ ತಂದು ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿತ್ತು, ಆದರೆ ಅವರು ಅದನ್ನು ಮಾಡಿಲ್ಲ ಎಂದು ಮುತಾಲಿಕ್ ಟೀಕಿಸಿದ್ದಾರೆ.

ದತ್ತ ಜಯಂತಿಯ ಸಮಯದಲ್ಲಿ ನೆಪ ಮಾತ್ರಕ್ಕೆ ಮುಖ ತೋರಿಸುತ್ತಿದ್ದ ಸುನಿಲ್ ಕುಮಾರ್, ಈಗ ಚುನಾವಣೆ ಎದುರಾಗಿರುವುದರಿಂದ ದತ್ತಪೀಠದ ಬಗ್ಗೆ ಪ್ರೀತಿ ಹೆಚ್ಚಾಗಿದೆ. ಈ ವಿವಾದ ಬಳಸಿಕೊಂಡು ಗೆಲುವು ಸಾಧಿಸುವ ಹುನ್ನಾರ ಅವರದ್ದು. ಅವರ ಈ ಲೆಕ್ಕಾಚಾರ ಯಶಸ್ವಿಯಾಗುವುದಿಲ್ಲ. ಅವರು ಈ ಚುನಾವಣೆಯಲ್ಲಿ ಖಂಡಿತ ಸೋಲು ಅನುಭವಿಸಲಿದ್ದಾರೆ ಎಂದು ಮುತಾಲಿಕ್ ಹೇಳಿಕೆ ನೀಡಿದ್ದಾರೆ.

Story first published: Wednesday, March 14, 2012, 10:42 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS