ರಾಮು-ರೆಡ್ಡಿ ಯಡ್ಡಿಗೆ ಕೊಟ್ಟ ಹಣದ ತನಿಖೆಗೆ ಆಗ್ರಹ

Posted by:
Published: Tuesday, March 13, 2012, 17:00 [IST]

Sriramulu and Yeddyurappa
ಬೆಂಗಳೂರು, ಮಾ. 13 : ಬಿಜೆಪಿ ಸಂಕಷ್ಟದಲ್ಲಿದ್ದಾಗ ನಾಯಕರಾಗಿದ್ದ ಯಡಿಯೂರಪ್ಪನವರಿಗೆ ಪ್ರತಿ ತಿಂಗಳು 10 ಕೋಟಿ ರು. ಮತ್ತು ಚುನಾವಣೆಯ ಸಂದರ್ಭದಲ್ಲಿ 200 ಕೋಟಿ ರು. ನೀಡಿರುವುದಾಗಿ ಶ್ರೀರಾಮುಲು ಗದಗದ ತೋಂಟದಾರ್ಯ ಸ್ವಾಮೀಜಿಗಳ ಮುಂದೆ ನಿವೇದಿಸಿಕೊಂಡಿರುವ ಸಂಗತಿ, ಯಡಿಯೂರಪ್ಪನವರನ್ನು ಮಾತ್ರವಲ್ಲ ಶ್ರೀರಾಮುಲುವನ್ನೂ ತೊಂದರೆಯಲ್ಲಿ ಸಿಲುಕಿಸಿದೆ.

ಟಿವಿ9 ಬಹಿರಂಗಪಡಿಸಿರುವ ಈ ಸ್ಫೋಟಕ ವಿಷಯದಿಂದಾಗಿ ಶ್ರೀರಾಮುಲು ಮತ್ತು ಆಡಳಿತ ಪಕ್ಷದ ವಿರುದ್ಧ ಮುರಕೊಂಡು ಬಿದ್ದಿರುವ ವಿರೋಧ ಪಕ್ಷಗಳು, ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಆದಾಯ ತೆರಿಗೆ ಇಲಾಖೆಯಿಂದಲೂ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕರು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.

ಗದಗದಲ್ಲಿ ಶ್ರೀರಾಮುಲು ಅವರು 'ಸತ್ಯಶೋಧನೆ'ಗಾಗಿ ಎರಡು ದಿನಗಳ ಉಪಾವಾಸ ಕುಳಿತಿರುವ ಸಂದರ್ಭದಲ್ಲಿಯೇ, ಶ್ರೀರಾಮುಲು ಅವರು ಸ್ವಾಮೀಜಿ ಮುಂದೆ ಹೇಳಿದ ಈ 'ಸತ್ಯನಿವೇದನೆ'ಯ ವಿಡಿಯೋ ಬಹಿರಂಗವಾಗಿದೆ. ಸರಕಾರ ರಚನೆ ವೇಳೆಗೆ ಯಡಿಯೂರಪ್ಪನವರಿಗೆ ನಾನು ಮತ್ತು ಜನಾರ್ದನ ರೆಡ್ಡಿಯವರು ಕೇಳಿದಾಗಲೆಲ್ಲ ಹಣ ನೀಡಿದ್ದೇವೆ ಎಂದು ಶ್ರೀರಾಮುಲು ಸ್ವಾಮೀಜಿ ಮುಂದೆ ಹೇಳಿದ್ದರು.

"ಸತ್ಯಶೋಧನೆಗಾಗಿ ಉಪವಾಸ ಕುಳಿತಿರುವ ಶ್ರೀರಾಮುಲು ಅವರೇ ನೀವೇ ಹೇಳಿ ಸತ್ಯ ಏನೆಂದು" ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ. ಇದು ಗೊತ್ತಿದ್ದ ಸಂಗತಿಯೆ, ಈಗ ಜಗಜ್ಜಾಹೀರಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

"ಶ್ರೀರಾಮುಲು ಯಡಿಯೂರಪ್ಪನವರಿಗೆ ಕೊಟ್ಟಿದ್ದಾರೆನ್ನಲಾದ 270 ಕೋಟಿ ರು. ನೀಡಿದ್ದಕ್ಕೆ ದಾಖಲೆಗಳು ಇವೆಯಾ? ಯಡಿಯೂರಪ್ಪ ಹಣ ಇಸಿದುಕೊಂಡಿದ್ದು ನಿಜಾನಾ? ಸ್ವಾಮೀಜಿಗಳೂ ಈ ಸಂಗತಿಯ ಬಗ್ಗೆ ಸತ್ಯಾಂಶ ಬಹಿರಂಗಪಡಿಸಬೇಕು. ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಸತ್ಯಸಂಗತಿ ಬೆಳಕಿಗೆ ಬರಬೇಕು" ಎಂದು ಕಾಂಗ್ರೆಸ್ ನಾಯಕ ಬಿಎಲ್ ಶಂಕರ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ನ ನಾಯಕರಾದ ಜಾಫರ್ ಶರೀಫ್, ಜಿ ಪರಮೇಶ್ವರಪ್ಪ, ಸಿಎಂ ಇಬ್ರಾಹಿಂ ಮುಂತಾದವರು ಇದರ ತನಿಖೆ ನಡೆಸಲು ಡಿವಿ ಸದಾನಂದ ಗೌಡರು ಆದೇಶಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಈ ಆರೋಪಗಳೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರು ಪ್ರತಿಕ್ರಿಯಿಸಿದ್ದಾರೆ.

Story first published: Tuesday, March 13, 2012, 17:00 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS