ಯಡಿಯೂರಪ್ಪಗೆ ದುಡ್ಡು ಕೊಟ್ಟಿದ್ದೆಲ್ಲ ಸುಳ್ಳು : ಶ್ರೀರಾಮುಲು

Posted by:
Published: Tuesday, March 13, 2012, 18:25 [IST]

Sriramulu denies allegations of making payment to Yeddyurappa
ಗದಗ, ಮಾ. 13 : "ನಾನು ಯಡಿಯೂರಪ್ಪನವರಿಗೆ ಯಾವುದೇ ಹಣ ನೀಡಿಲ್ಲ. ಹಣ ನೀಡಿದ್ದೇನೆಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾದ ಮಾತು" ಎಂದು ಮಾಜಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಆರೋಪಗಳನ್ನೆಲ್ಲ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಗದಗದಲ್ಲಿ ಎರಡು ದಿನಗಳ ಸತ್ಯಾಗ್ರಹಕ್ಕೆ ಕುಳಿತಿರುವ ಸಂದರ್ಭದಲ್ಲಿ ಶ್ರೀರಾಮುಲು ಅವರು, ತಾವು ಬಿಜೆಪಿ ಸರಕಾರ ರಚಿಸುವ ಸಂದರ್ಭದಲ್ಲಿ ಯಡಿಯೂರಪ್ಪನವರಿಗೆ 270 ಕೋಟಿ ರು. ನೀಡಿರುವುದಾಗಿ ಮಾಡಿರುವ ಆರೋಪವನ್ನು ಮಂಗಳವಾರ ನಿರಾಕರಿಸಿದರು.

ಹಣ ನೀಡಿರುವ ಕುರಿತು ಗದಗದ ತೋಂಟದಾರ್ಯ ಶ್ರೀಗಳಾದ ಡಾ. ಸಿದ್ದಲಿಂಗ ಸ್ವಾಮೀಜಿ ಎದುರಿಗೆ ಹಣ ನೀಡಿರುವ ಸಂಗತಿಯನ್ನು ಹೇಳಿಲ್ಲ. ಉಪವಾಸ ಸತ್ಯಾಗ್ರಹಕ್ಕಾಗಿ ಅವರನ್ನು ಭೇಟಿ ಮಾಡಿ, ಅವರ ಬೆಂಬಲ ಮತ್ತು ಆಶೀರ್ವಾದ ಪಡೆಯಲು ಮಾತ್ರ ಹೋಗಿದ್ದುದಾಗಿ ಶ್ರೀರಾಮುಲು ವಾದ ಮಾಡಿದ್ದಾರೆ.

ನನಗೀಗ ರಾಜ್ಯಾದ್ಯಂತ ಅಪಾರವಾದ ಜನಬೆಂಬಲ ಸಿಗುತ್ತಿದೆ. ಇದಕ್ಕೆ ಇಲ್ಲಿ ಗದಗದಲ್ಲಿ ಸೇರಿರುವ ಜನಸಾಗರವೇ ಸಾಕ್ಷಿ. ನನ್ನ ಸಾಧನೆ, ಯಶಸ್ಸನ್ನು ಸಹಿಸದ ಕೆಲವರು ನನ್ನ ವಿರುದ್ಧ ಸಂಚು ನಡೆಸಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶ್ರೀರಾಮುಲು ಪ್ರತ್ಯಾರೋಪ ಮಾಡಿದರು. ಶ್ರೀರಾಮುಲು ಯಡಿಯೂರಪ್ಪನವರಿಗೆ ಹಣ ನೀಡಿರುವ ಹಗರಣದ ಸಿಬಿಐ ತನಿಖೆ ನಡೆಸಬೇಕೆಂದು ವಿರೋಧ ಪಕ್ಷಗಳು ದುಂಬಾಲು ಬಿದ್ದಿವೆ.

Story first published: Tuesday, March 13, 2012, 18:25 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS