ಕಂಬನಿ ತರಿಸಿದ 'ಕೋಟ್ಯಧಿಪತಿ' ಪುನೀತ್ ಮಾತು!

Written by: * ಲಕ್ಷ್ಮಿನರಸಿಂಹ, ಚಾಮರಾಜನಗರ
Updated: Wednesday, July 11, 2012, 16:57 [IST]

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ' ಗೇಮ್ ಶೋ ದಿನದಿಂದ ದಿನಕ್ಕೆ ಟಿಆರ್ ಪಿ ರೇಟಿಂಗ್ ನಲ್ಲಿ ಮುನ್ನುಗ್ಗುತ್ತಿದೆ. ಈ ಶೋಗೆ ಪುನೀತ್ ಅವರ ನಿರೂಪಣಾ ಶೈಲಿ ಟಾನಿಕ್ ನಂತೆ ಕೆಲಸ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ಇತ್ತೀಚೆಗೆ ಸ್ಪರ್ಧಿಯೊಬ್ಬರು ತಮ್ಮನ್ನು ಪರಿಚಯಿಸಿಕೊಳ್ಳುವಾಗ ತಮ್ಮದು ಚಾಮರಾಜನಗರ ಎಂದರು. ಇದಕ್ಕೆ ತುಂಬಾ ಖುಷಿಯಾದ ಪುನೀತ್ "ಏ ನಮ್ಮೂರು ಕಣ್ರಿ" ಎಂದರು. ಈ ಮಾತು ಕೇಳಿ ಚಾಮರಾಜನಗರ ಕಡೆಯವರಿಗೆ ಒಮ್ಮೆಲೆ ಪುನೀತ್ ಮೇಲೆ ಪ್ರೀತಿ ಅಭಿಮಾನಗಳು ಉಕ್ಕಿಬಂದವು.

ಮುಖ್ಯಮಂತ್ರಿಗಳು ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಕುರುಡು ನಂಬಿಕೆ ನಮ್ಮ ರಾಜಕಾರಣಿಗಳಲ್ಲಿ ಬೇರೂರಿದೆ. ಈ ರೀತಿಯ ಅಪಖ್ಯಾತಿಗೆ ಗುರಿಯಾಗಿರುವ ಊರಿನ ಬಗ್ಗೆ ಪುನೀತ್ ನಮ್ಮೂರು ಎಂದಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ.

ವರನಟ ರಾಜ್ ಕುಮಾರ್ ಅವರಿಗೆ ತಮ್ಮ ಊರಿನ ಮೇಲೆ ಅಪಾರ ಅಭಿಮಾನ ಇತ್ತು. ಈ ಅಭಿಮಾನ ಅವರ ಮಕ್ಕಳಲ್ಲೂ ಮುಂದುವರೆಯುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ನಮ್ಮ ಊರು ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದು ಕೇಳಿ ಕಣ್ಣಾಲಿಗಳು ತುಂಬಿ ಬಂದವು.

ಇನ್ನೊಂದು ಸಂಗತಿ ಎಂದರೆ 'ಕೋಟ್ಯಧಿಪತಿ'ಯಲ್ಲಿ ಭಾಗವಹಿಸುತ್ತಿರುವ ಕೆಲವು ಸ್ಪರ್ಧಿಗಳು ಅತಿರೇಕದಿಂದ ವರ್ತಿಸುತ್ತಿರುವುದು ನಿಜಕ್ಕೂ ಬೇಸರ ತರಿಸುತ್ತಿದೆ. ಒಬ್ಬ ಮಹಿಳೆಯಂತೂ ತಾವು ಬಂದ ಉದ್ದೇಶವನ್ನೇ ಮರೆದು ಯದ್ವಾತದ್ವಾ ಕುಣಿದು ಕುಪ್ಪಳಿಸಿದ್ದು ಖೇದಕರ.

ಇನ್ನೊಬ್ಬರು ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ ಎಂದು ಹೆಮ್ಮೆಯಿಂದ ಹೇಳಿಕೊಂಡರೂ ಅವರಿಗೆ ಆದಿತ್ಯವಾರವೆಂದರೆ ಭಾನುವಾರ ಎಂದು ಗೊತ್ತಿಲ್ಲದೆ ಇದ್ದದ್ದು ನಿಜಕ್ಕೂ ಶೋಚನೀಯ. ಸರ್ಕಾರ 'ಮೂವತ್ತು' ರೂಪಾಯಿ ನೋಟುಗಳನ್ನು ಮುದ್ರಣ ಮಾಡುತ್ತದೆ ಎಂದು ಕೆಲವರು ಉತ್ತರಿಸಿದ್ದು ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದವರೂ ಶೋನಲ್ಲಿ ಭಾಗವಹಿಸುತ್ತಿದ್ದಾರಲ್ಲ ಅನ್ನಿಸಿತು.

ಆಯ್ಕೆಯಾದ ಸಂತಸದಲ್ಲೊ ಅಥವಾ ಭಯದಲ್ಲೋ ಅವರು ಹಾಗೆ ವಿವೇಚನೆ ಇಲ್ಲದಂತೆ ವರ್ತಿಸಿರಬಹುದು. ಆದರೆ ವಾಹಿನಿಯವರು ಈ ರೀತಿಯ ಅತಿರೇಕಗಳಿಗೆ ಕತ್ತರಿ ಹಾಕಬಹುದಿತ್ತಲ್ಲಾ? ಮುಂಬರುವ ಸಂಚಿಕೆಗಳಲ್ಲಾದರೂ ಈ ಅತಿರೇಕಗಳು ಕಡಿಮೆಯಾಗಲಿ ಎಂದು ಆಶಿಸುತ್ತೇವೆ.

Story first published: Wednesday, July 11, 2012, 16:50 [IST]
Topics: ಕನ್ನಡದ ಕೋಟ್ಯಧಿಪತಿ ಚಾಮರಾಜನಗರ ಪುನೀತ್ ರಾಜ್ ಕುಮಾರ್ ಸುವರ್ಣ ವಾಹಿನಿ ಟಿವಿ puneeth rajkumar chamarajanagar tv suvarna tv kannadada kotyadipathi
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS