ಒಮ್ಮೆ ನೋಡಿ ಮರೆಯಬಹುದಾದ ಪ್ರಜ್ವಲ್ 'ಸಾಗರ್'

Written by: ಶ್ರೀರಾಮ್ ಭಟ್
Updated: Sunday, August 12, 2012, 11:42 [IST]

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕತ್ವದ 'ಸಾಗರ್' ಚಿತ್ರ ಬಹಳ ಕಾಲದ ನಂತರ ಪ್ರಜ್ವಲ್ ಅಭಿಮಾನಿಗಳನ್ನು ಚಿತ್ರಮಂದಿರಕ್ಕೆ ಕರೆತಂದಿದೆ. ಈ ಮೊದಲು ಕೃಷ್ಣ, ಜಾಲಿಡೇಸ್, ಫ್ರೆಂಡ್ಸ್. ಚೆಲ್ಲಾಟ ಮುಂತಾದ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಎಂಡಿ ಶ್ರೀಧರ್, ಸಾಗರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೀಮೇಕ್ ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಕಂಡಿದ್ದ ಶ್ರೀಧರ್, ಸ್ವಮೇಕ್ ಚಿತ್ರ ಮಾಡಿದ್ದನ್ನು ಮೆಚ್ಚಿಕೊಳ್ಳಲೇಬೇಕು. ಆದರೆ ಚಿತ್ರವನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು.

ಮಾಮೂಲಿ ಕಥೆಯೊಂದನ್ನು ತೆರೆಗೆ ತರುವಾಗ ನಿರ್ದೇಶಕರು, ನಿರೂಪಣೆ ಮೇಲೆ ಇನ್ನೂ ಹೆಚ್ಚಿನ ಬಿಗಿಹಿಡಿತ ಸಾಧಿಸಬೇಕಿತ್ತು. ಮಾಮೂಲಿ ಎನಿಸುವ ಕಥೆಗೆ, ಚಿತ್ರಕಥೆ ಹಾಗೂ ನಿರೂಪಣೆ ಹೊಸತು ಎನಿಸಿದ್ದರೂ ಸಾಕಿತ್ತು. ಆದರೆ ಸಾಮಾನ್ಯ ಲವ್ ಸ್ಟೋರಿಯನ್ನು ಅಗತ್ಯಕ್ಕಿಂತ ಹೆಚ್ಚು ಎಳೆದು ಪ್ರೇಕ್ಷಕರಿಗೆ ಬೋರಾಗುವಂತೆ ನಿರೂಪಿಸಿಬಿಟ್ಟಿದ್ದಾರೆ. ಮೊದಲಾರ್ಧದ ಕಥೆಯಲ್ಲಿ ಸ್ವಲ್ಪ ಕುತೂಹಲ ಹಾಗೂ ಸಸ್ಪೆನ್ಸ್ ಕಾಯ್ದುಕೊಳ್ಳುವಲ್ಲಿ ಸಫಲವಾದ ನಿರ್ದೇಶಕರು ಮಧ್ಯಂತರದ ನಂತರ (ಸುಸ್ತಾಗಿ..!) ಕೈಚೆಲ್ಲಿದ್ದಾರೆ. ಬಿಎ ಮಧು ಸಂಭಾಷಣೆ ಅಲ್ಲಲ್ಲಿ ಮಾತ್ರ ಚೆನ್ನಾಗಿದೆ.

ದೊಡ್ಡ ಉದ್ಯಮಿ ರಾಜಶೇಖರ್ ಮಗ ಸಾಗರ್ (ಪ್ರಜ್ವಲ್ ದೇವರಾಜ್) ಈ ಚಿತ್ರದ ಕಥೆಯ ಕೇಂದ್ರಬಿಂದು. ವಿದೇಶದಲ್ಲಿ ಓದಿಕೊಂಡು ಬಂದಿರುವ ಮಗನಿಗೆ, ಸ್ವದೇಶಿ ಅದರಲ್ಲೂ ಅತ್ತೆಯ ಮಗಳನ್ನೇ ಮದುವೆಮಾಡುವಲ್ಲಿ ಸಾಗರ್ ಕುಟಂಬ ಪಡುವ ಪಯತ್ನವೇ ಕಥೆಯ ಎಳೆ. ಅದು ಇಷ್ಟವಾಗದ ಕಥಾನಾಯಕ ಸಾಗರ್, ಅದೊಂದರಿಂದ ತಪ್ಪಿಸಿಕೊಳ್ಳಲು ಹೋಗಿ ಹತ್ತಾರು ಸಮಸ್ಯೆಗಳಿಗೆ ಸಿಲುಕಿ ಅದರಿಂದ ಹೊರಬರುವ ಪ್ರಯತ್ನವೇ ಸಾಗರ್ ಚಿತ್ರದ ಚಿತ್ರಕಥೆ ಹಾಗೂ ನಿರೂಪಣೆ. ನವಿರಾದ ನಿರೂಪಣೆಯಿದ್ದರೂ ಚಿತ್ರಕಥೆ ಬಿಗಿಯಾಗಿಲ್ಲದೇ ಸಾಗರ್ ಸೊರಗಿದೆ.

ಪ್ರಜ್ವಲ್ ದೇವರಾಜ್ ಹೆಸರಿಗೆ ತಕ್ಕಂತೆ ಪಕ್ಕಾ ಡೈನಾಮಿಕ್ ಪ್ರಿನ್ಸ್. ನಟನೆ, ಡಾನ್ಸ್, ಫೈಟ್ಸ್ ಎಲ್ಲದರಲ್ಲೂ ಸೂಪರ್. ತೆರೆಯ ಮೇಲೆ ಅಗತ್ಯಕ್ಕಿಂತ ಹೆಚ್ಚು ಅಗಲವಾಗಿ ಕಾಣುತ್ತಾರೆ ಎಂಬುದನ್ನು ಬಿಟ್ಟರೆ, ಸಾಗರ್ ಚಿತ್ರ ಪ್ರಜ್ವಲ್ ಹಬ್ಬವಾಗಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಪಾದರಸ ಕುಡಿದವರಂತೆ ಚಿತ್ರದುದ್ದಕ್ಕೂ ಲವಲವಿಕೆ ಕಾಯ್ದುಕೊಂಡಿರುವ ರಾಧಿಕಾ ಪಂಡಿತ್ ಅಭಿನಯ ಎಂದಿನಂತೆ ಅಮೋಘ, ಲೀಲಾಜಾಲ. ಹರಿಪ್ರಿಯಾ ನಟನೆ ಚೆನ್ನಾಗಿದೆ. ಅಷ್ಟೇ ಅಲ್ಲ, ತಮ್ಮ ಕಣ್ಣುಕುಕ್ಕುವ ಸೌಂದರ್ಯದಿಂದ ಹದಿಹರೆಯದವರ ಹೃದಯ ಕದಿಯುವಲ್ಲಿ ಹರಿಪ್ರಿಯಾ ಸ್ಪರ್ಧಿಯೇ ಇಲ್ಲದ ಹಾಟ್ ಫೇವರೆಟ್. ಅಷ್ಟೇನೂ ಪ್ರಾಮುಖ್ಯತೆಯಿಲ್ಲದ ಪಾತ್ರಕ್ಕೆ ಸಂಜನಾ ನ್ಯಾಯ ಒದಗಿಸಿದ್ದಾರೆ.

ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರುವ ವಿಲನ್ ಪಾತ್ರಧಾರಿ ತೆಲುಗಿನ ದೇವಗಿಲ್, ಪಾತ್ರವಾಗಲೀ ಅಭಿನಯವಾಗಲೀ ಅಷ್ಟೇನೂ ಗಮನಸೆಳೆಯುವುದಿಲ್ಲ. ಹೀಗಾಗಿ ಮೊದಲ ಬಾರಿಗೆ ಡಬ್ಬಿಂಗ್ ಮಾಡಿರುವ ಸಂಗೀತ ನಿರ್ದೇಶಕ ಗುರುಕಿರಣ್ ಪ್ರಯತ್ನಕ್ಕೆ ಯಾವುದೇ ಕ್ರೆಡಿಟ್ ಸಿಗುವುದಿಲ್ಲ. ದೇವಗಿಲ್ ಒಂದಷ್ಟು ಕಿರುಚಿ, ಅರಚಿ ನಟಿಸಿ ಹೋಗಿದ್ದಾರೆ ಎನ್ನಬಹುದಷ್ಟೇ! ಮತ್ತೊಬ್ಬ ವಿಲನ್ ಪಾತ್ರಧಾರಿ ಆದಿ ಲೋಕೇಶ್ ದೇವಗಿಲ್ ಅವರಿಗೆ ಸ್ಪರ್ಧೆ ನೀಡಿದ್ದಾರೆ ಎನ್ನಲಡ್ಡಿಯಿಲ್ಲ.

ಇತ್ತೀಚಿಗಷ್ಟೇ ತಮಿಳು ಚಿತ್ರವೊಂದರಲ್ಲಿ ನಾಯಕನಾಗಿ ನಟಿಸಿಬಂದಿರುವ ಕನ್ನಡದ ನಟ ಅಮಿತ್, ಚಿಕ್ಕದಾದ ಅತಿಥಿ ಪಾತ್ರದಲ್ಲಿ ತೆರೆಯಮೇಲೆ ಇರುವಷ್ಟೂ ಹೊತ್ತು ಮಿಂಚಿದ್ದಾರೆ. ಇನ್ನು ಪೋಷಕವರ್ಗದಲ್ಲಿ ನಟಿಸಿರುವ ಅವಿನಾಶ್, ಶರತ್ ಲೋಹಿತಾಶ್ವ, ಸ್ವಯಂವರ ಚಂದ್ರು, ವಿನಯಾ ಪ್ರಕಾಶ್, ಸಂಗೀತಾ, ಹಾಗೂ ಉಳಿದವರದು ಪಾತ್ರಕ್ಕೆ ಸೂಕ್ತವಾದ ಅಭಿನಯ. ಆಸ್ಟ್ರೇಲಿಯಾ ಹಾಗೂ ಸಿಂಗಾಪುರಗಳಲ್ಲಿ ಮಾಡಿರುವ ಹಾಡಿನ ಚಿತ್ರೀಕರಣ ಸಖತ್ತಾಗಿದೆ. ಉಳಿದ ಲೊಕೇಶನ್ನುಗಳೂ ಚೆನ್ನಾಗಿದ್ದು ಚಿತ್ರ ಸಾಕಷ್ಟು ರಿಚ್ ಆಗಿಯೂ ಮೂಡಿಬಂದಿದೆ.

ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ಸೋನು ನಿಗಮ್ ಹಾಡಿರುವ 'ಮೊದಲೇ ಏಕೆ ಸಿಗಲಿಲ್ಲ ನೀ ನನಗೆ...' ಹಾಡು ಥಿಯೇಟರಿನಿಂದ ಹೊರಬಂದಮೇಲೂ ಗುನುಗುವಂತಿದೆ. ಉಳಿದ ಹಾಡುಗಳು ಹಾಗೂ ಸಂಗೀತ ಓಕೆ ಎನ್ನಬಹುದು. ಸಂಗೀತದ ಜೊತೆ ಡಬ್ಬಿಂಗ್ ಮಾಡಿರುವ ಗುರುಕಿರಣ್ ಪ್ರಯತ್ನ ಚೆನ್ನಾಗಿದ್ದರೂ ಪಾತ್ರದೊಂದಿಗೆ ತೇಲಿಹೋಗಿದೆ. ಕೃಷ್ಣಕುಮಾರ್ ಛಾಯಾಗ್ರಹಣ ಹಾಗೂ ಸೌಂದರ್ ರಾಜ್ ಸಂಕಲನ ಚೆನ್ನಾಗಿದ್ದು ಚಿತ್ರಕ್ಕೆ ರಿಚ್ ನೆಸ್ ಮೂಡಿಸಿದೆ.

ಒಟ್ಟಿನಲ್ಲಿ ಸಾಗರ್ ಚಿತ್ರಕ್ಕೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಹಳ ಕಾಲ ಕಾದು ಪ್ರಜ್ವಲ್ ಅವರನ್ನು ತೆರೆಯ ಮೇಲೆ ನೋಡುತ್ತಿರುವ ಅವರ ಅಭಿಮಾನಿ ಬಳಗಕ್ಕೆ ಸಾಗರ್ ಇಷ್ಟವಾಗಿ ಚಿತ್ರ ಯಶಸ್ವಿಯಾದರೆ ಆಶ್ಚರ್ಯವಿಲ್ಲ. ಆದರೆ ಗೆದ್ದೇ ಗೆಲ್ಲುತ್ತದೆ ಎಂದು ಬೆನ್ನು ತಟ್ಟುವ ಮಟ್ಟಿಗೆ ಚಿತ್ರ ಚೆನ್ನಾಗಿದೆ ಎನ್ನಲಾಗದು. ಆದರೆ, ಪ್ರಜ್ವಲ್ ನೋಡಲು ಬರುವ ಅಭಿಮಾನಿಗಳಿಗೆ ಖಂಡಿತ ನಿರಾಶೆಯಂತೂ ಕಾಡುವುದಿಲ್ಲ ಎಂದು ಧಾರಾಳವಾಗಿ ಹೇಳಬಹುದು. ಜೊತೆಗೆ ಮೂವರು ಚೆಂದದ ನಾಯಕಿಯರು ಬೋನಸ್!

Story first published: Friday, August 10, 2012, 15:04 [IST]
Topics: ಚಿತ್ರ ವಿಮರ್ಶೆ ಪ್ರಜ್ವಲ್ ದೇವರಾಜ್ ಎಂಡಿ ಶ್ರೀಧರ್ ರಾಧಿಕಾ ಪಂಡಿತ್ ಹರಿಪ್ರಿಯಾ movie review prajwal devraj md sridhar radhika pandit haripriya
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS