ರಂಭಾ ವೈವಾಹಿಕ ಜೀವನದಲ್ಲಿ ಅಲ್ಲೋಲಕಲ್ಲೋಲ?

Posted by:
Published: Thursday, August 2, 2012, 16:01 [IST]

ಕನ್ನಡದ 'ಸರ್ವರ್ ಸೋಮಣ್ಣ' ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ದಕ್ಷಿಣ ಭಾರತದ ನಟಿ ರಂಭಾ ವೈವಾಹಿಕ ಜೀವನದಲ್ಲಿ ಭಾರಿ ಬಿರುಕು ಮೂಡಿದೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ. ಎರಡು ವರ್ಷಗಳ ಹಿಂದೆ ಅನಿವಾಸಿ ಭಾರತೀಯ ಇಂದಿರನ್ ಪದ್ಮನಾಭಂ ಅವರ ಕೈಹಿಡಿದಿದ್ದರು ರಂಭಾ.

ಇವರಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಹೆಣ್ಣು ಮಗು ಕೂಡ ಇದೆ. ಈಗ ರಂಭಾ ಅವರು ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಇದ್ದಕ್ಕಿದ್ದಂತೆ ಹರಿದಾಡುತ್ತಿದೆ. ಆದರೆ ಈ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ ರಂಭಾ.

"ನಾನು ನನ್ನ ಗಂಡ ಹಾಗೂ ಮಗುವಿನ ಜೊತೆ ಹಾಯಾಗಿದ್ದೇನೆ. ನಮ್ಮ ಸಂಸಾರ ಹಾಲು ಜೇನಿನಷ್ಟೆ ಮಧುರವಾಗಿದೆ. ಅಂತರ್ಜಾಲದಲ್ಲಿ ನಮ್ಮಿಬ್ಬರ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡುವ ಪ್ರಯತ್ನವಿದು. ನನ್ನ ವೈವಾಹಿಕ ಜೀವನದ ಬಗ್ಗೆ ಇಲ್ಲದ ಸಲ್ಲದ ಗಾಳಿಸುದ್ದಿಗಳನ್ನು ಹಬ್ಬಿಸಿದರೆ ಸುಮ್ಮನಿರಲ್ಲ ಎಂದಿದ್ದಾರೆ ರಂಭಾ.

ಕೆನಡಾ ಮೂಲದ ಇಂದ್ರನ್ ಪದ್ಮನಾಭಂ ಅವರ ಜೊತೆ ತಿರುಪತಿಯಲ್ಲಿ ರಂಭಾ ಸಪ್ತಪದಿ ತುಳಿದಿದ್ದರು. ಏಪ್ರಿಲ್ 2010ರಲ್ಲಿ ಇವರಿಬ್ಬರ ಮದುವೆ ನೆರವೇರಿತ್ತು. ಮದುವೆಯಾದ ಬಳಿಕ ಬೆಳ್ಳಿತೆರೆಯಿಂದ ದೂರ ಸರಿದಿದ್ದ ರಂಭಾ ಮಾಧ್ಯಮಗಳ ಕಣ್ಣಿಗೂ ಬಿದ್ದಿರಲಿಲ್ಲ.

ಇವರಿಬ್ಬರ ಅನುರೂಪ ದಾಂಪತ್ಯದ ಫಲವಾಗಿ ಜನವರಿ 2011ರಂದು ಮುದ್ದಾದ ಹೆಣ್ಣು ಮಗುವಿಗೆ ರಂಭಾ ಜನ್ಮ ನೀಡಿದ್ದರು. ಆ ಮಗುವಿಗೆ ಲಾವಣ್ಯ ಎಂದು ಹೆಸರಿಡಲಾಗಿದೆ. ಸದ್ಯಕ್ಕೆ ಟೊರೊಂಟೋದಲ್ಲಿ ನೆಲೆಸಿರುವ ರಂಭಾ ಬಿಜಿನೆಸ್ ನಲ್ಲಿ ತನ್ನ ಗಂಡನಿಗೆ ಆಧಾರವಾಗಿದ್ದಾರೆ.

ರಂಭಾ ಮೂಲ ಹೆಸರು ವಿಜಯಲಕ್ಷ್ಮಿ. ಬೆಳ್ಳಿತೆರೆಗೆ ಅಡಿಯಿಟ್ಟ ಬಳಿಕ ಹೆಸರು ರಂಭಾ ಎಂದಾಯಿತು. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬಂಗಾಳಿ ಮತ್ತು ಭೋಜ್ ಪುರಿ ಭಾಷೆಗಳಲ್ಲಿ ನಟಿಸಿದ ಖ್ಯಾತಿ ರಂಭಾ ಅವರದು.

ಕನ್ನಡದಲ್ಲಿ ಅನಾಥರು, ಸಾಹುಕಾರ, ಗಂಡುಗಲಿ ಕುಮಾರರಾಮ, ಪಾಂಡುರಂಗ ವಿಠಲ, ಭಾವ ಭಾಮೈದ, ಓ ಪ್ರೇಮವೆ, ಸರ್ವರ್ ಸೋಮಣ್ಣ ಚಿತ್ರಗಳಲ್ಲಿ ರಂಭಾ ಅಭಿನಯಿಸಿದ್ದಾರೆ. ಸುದ್ದಿಯಲ್ಲೇ ಇಲ್ಲದ ತಾರೆಯನ್ನು ಸುಖಾಸುಮ್ಮನೆ ಎಳೆದು ತಂದಿಟ್ಟಿದ್ದಾಷ್ಟೇ. (ಏಜೆನ್ಸೀಸ್)

Story first published: Thursday, August 02, 2012, 16:01 [IST]
Topics: ರಂಭಾ ಮದುವೆ ವಿವಾಹ ವಿಚ್ಛೇದನ ಗಾಸಿಪ್ rambha marriage divorce gossip
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS