ಕನ್ನಡ ಚಿತ್ರಕ್ಕೆ ಕೈ ಕೊಟ್ಟ ಮಾಡೆಲಿಂಗ್ ಬೆಡಗಿ ತಾಪಸಿ

Posted by:
Published: Saturday, July 7, 2012, 17:47 [IST]

ತಮಿಳು, ತೆಲುಗು ಚಿತ್ರರಂಗದ ಹಾಟ್ ತಾರೆ ತಾಪಸಿ ಪನ್ನು ಕನ್ನಡ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಠುಸ್ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ಆದರೆ ತಾನು ಯಾವುದೇ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದು ತಾಪಸಿ ಸ್ಪಷ್ಟಪಡಿಸಿದ್ದಾರೆ.

ಕನ್ನಡದಲ್ಲಿ ಅಭಿನಯಿಸಲು ನನಗೆ ಆಫರ್ ಬಂದಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ. ಆದ ಕಾರಣ ಕನ್ನಡದಲ್ಲಿ ಅಭಿನಯಿಸಲು ಸಾಧ್ಯವಾಗುತ್ತಿಲ್ಲ ಎಂದು ತಾಪಸಿ ವಿವರವಾಗಿ ಹೇಳಿದ್ದಾರೆ. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಬಿಜಿಯಾಗಿರುವ ತಾಪಸಿ ತಮಿಳಿನ 'ಮದ ಗಜ ರಾಜ' (ಎಂಜಿಆರ್) ಎಂಬ ಚಿತ್ರವನ್ನೂ ತಿರಸ್ಕರಿಸಿದ್ದರು.

ಈಗಾಗಲೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಒಂದು ಸುತ್ತು ಹಾಕಿಕೊಂಡು ಬಂದಿರುವ ತಾಪಸಿ ಕನ್ನಡಕ್ಕೆ ಆಗಮಿಸುವ ಮೂಲಕ ಪಂಚಭಾಷಾ ತಾರೆ ಎನ್ನಿಸಿಕೊಳ್ಳುವ ಅವಕಾಶ ಸಿಕ್ಕಿತ್ತು. ಆದರೆ ಈಗ ಆಕೆ ತನ್ನ ಕೈಯಾರೆ ಆ ಸುವರ್ಣಾವಕಾಶವನ್ನು ಕಳೆದುಕೊಂಡಿದ್ದಾರೆ.

ಉಪೇಂದ್ರ ನಾಯಕ ನಟನಾಗಿರುವ 'ತ್ರಿವಿಕ್ರಮ' ಎಂಬ ಚಿತ್ರದಲ್ಲಿ ತಾಪಸಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತು. ಆಗಸ್ಟ್ ನಲ್ಲಿ ಸೆಟ್ಟೇರಲಿದ್ದ ಈ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. 'ಟೋಪಿವಾಲ' ಚಿತ್ರದ ಬಳಿಕ ಉಪೇಂದ್ರ ಈ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ 'ಶಿವ' ಚಿತ್ರದಲ್ಲಿ ಓಂ ಪ್ರಕಾಶ್ ರಾವ್ ಬಿಜಿಯಾಗಿದ್ದಾರೆ. ಅದು ಮುಗಿದ ಬಳಿಕವಷ್ಟೇ ತ್ರಿವಿಕ್ರಮನ ಸಾಹಸ. ಇಡೀ ಬೆಂಗಳೂರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೋರಾಡುವ ವ್ಯಕ್ತಿಯೊಬ್ಬನ ಸುತ್ತ ಕತೆ ಗಿರಿಕಿ ಹೊಡೆಯುತ್ತದೆ. ಕೆಲವೊಂದು ಮಾಸ್ ಅಂಶಗಳ ಜೊತೆಗೆ ಒಂದಷ್ಟು ಪ್ರೀತಿ ಪ್ರೇಮ ಪ್ರಣಯಕ್ಕೂ ಜಾಗ ನೀಡಲಾಗಿದೆಯಂತೆ. ಚಿತ್ರದ ಉಳಿದ ತಾಂತ್ರಿಕ ವರ್ಗ ಹಾಗೂ ತಾರಾಬಳಗದ ವಿವರಗಳು ಸದ್ಯಕ್ಕೆ ಸಸ್ಪೆನ್ಸ್.

ತೆಲುಗಿನಲ್ಲಿ ಈಕೆ ಅಭಿನಯಿಸಿದ 'ಮಿ.ಪರ್ಫೆಕ್ಟ್ ' ಸಕ್ಸಸ್ ಆದ ಬಳಿಕ ತಾಪಸಿ ಸಂಭಾವನೆ ದಿಢೀರ್ ಎಂದು ಏರಿಕೆಯಾಗಿತ್ತು. ರು.38 ರಿಂದ ರು.42 ಲಕ್ಷಕ್ಕೆ ಹೊಂದಿಕೊಳ್ಳುತ್ತಿದ್ದ ತಾಪಸಿ ಏಕ್ ದಮ್ ರು.60 ಲಕ್ಷಕ್ಕೆ ಜಿಗಿದರು. ಸಂಭಾವನೆ ರೂಪದಲ್ಲಿ ರು.50 ಲಕ್ಷ ತೆಗೆದುಕೊಂಡರೆ ಉಳಿದ ರು.10 ಲಕ್ಷ ಹೋಟೆಲ್ ಖರ್ಚುವೆಚ್ಚಕ್ಕೆ ಸಮರ್ಪಯಾಮಿ! (ಏಜೆನ್ಸೀಸ್)

Story first published: Saturday, July 07, 2012, 17:47 [IST]
Topics: ತಾಪಸಿ ಉಪೇಂದ್ರ ಓಂ ಪ್ರಕಾಶ್ ರಾವ್ upendra tapasee om prakash rao
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS