ಡಿಂಪಲ್ ಗೆ ಕಿಲುಬುಕಾಸು ಬಿಟ್ಟುಹೋಗಿಲ್ಲ ರಾಜೇಶ್

Posted by:
Updated: Friday, August 10, 2012, 16:32 [IST]

ಬಾಲಿವುಡ್ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ನಿಧನಾನಂತರ (ಜು.18, 2012) ಹಲವಾರು ರೋಚಕ ಸಂಗತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಮೊನ್ನೆ ಮೊನ್ನೆ ಖನ್ನಾ ಅವರ ಮುಸ್ಸಂಜೆ ಗೆಳೆತಿಯೊಬ್ಬರು ಚಿತೆ ಆರುವ ಮುನ್ನವೇ ನೋಟೀಸ್ ಕಳುಹಿಸಿದ್ದರು (ಸಂಪೂರ್ಣ ವರದಿ ಓದಿ).

ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಖನ್ನಾ ಬರೆದಿಟ್ಟಿರುವ ಉಯಿಲಿನಲ್ಲಿ ಪತ್ನಿ ಡಿಂಪಲ್ ಕಪಾಡಿಯಾ ಹೆಸರನ್ನೇ ಉಲ್ಲೇಖಿಸದೆ ತನ್ನ ಆಸ್ತಿಯಲ್ಲಿ ಕಿಲುಬುಕಾಸನ್ನೂ ಬರೆದಿಲ್ಲ ಎಂಬ ಮಹತ್ವದ ಮಾಹಿತಿ ಲೀಕ್ ಆಗಿದೆ. ಕೊನೆಯ ದಿನಗಳಲ್ಲಿ ಖನ್ನಾ ಅವರನ್ನು ಡಿಂಪಲ್ ನೆರಳಿನಂತೆ ನೋಡಿಕೊಂಡಿದ್ದರು.

ಮೂಲಗಳ ಪ್ರಕಾರ, ತನ್ನ ಸಮಸ್ಥ ಆಸ್ತಿಯನ್ನೂ ತನ್ನಿಬ್ಬರು ಪುತ್ರಿಯರಾದ ಟ್ವಿಂಕಲ್ ಹಾಗೂ ರಿಂಕಿ ಖನ್ನಾ ಅವರಿಗೆ ಬರೆದು ಹೋಗಿದ್ದಾರೆ ರಾಜೇಶ್. ತನ್ನ ಆಶೀರ್ವಾದ್ ಬಂಗಲೆ, ಬ್ಯಾಂಕ್ ಅಕೌಂಟ್ ಗಳು ಹಾಗೂ ಚರ, ಸ್ಥಿರಾಸ್ತಿ ಸಹ ತನ್ನ ಪುತ್ರಿಯರಿಗೇ ಸೇರಿದ್ದು ಎಂದು ಉಯಿಲಿನಲ್ಲಿ ಖನ್ನಾ ಬರೆದಿಟ್ಟಿದ್ದಾರೆ.

ಈ ಮೃತ್ಯಪತ್ರವನ್ನು ಅವರು ನಿಧನರಾಗುವುದಕ್ಕೂ ಕೆಲ ವಾರಗಳ ಹಿಂದಷ್ಟೇ ಬರೆದಿದ್ದರಂತೆ. ತನ್ನ ಆಸ್ತಿಯಲ್ಲಿ ಕವಡೆಕಾಸನ್ನೂ ಪತ್ನಿಗೆ ಬಿಟ್ಟುಹೋಗದಿರುವುದು ಬಾಲಿವುಡ್ ಚಿತ್ರಜಗತ್ತಿನಲ್ಲಿ ಅಚ್ಚರಿಗೆ ಕಾರಣವಾಗಿದೆ. 1973ರಲ್ಲಿ ಡಿಂಪಲ್ ರನ್ನು ವರಿಸಿದ ಖನ್ನಾ ಬಳಿಕ 1984ರಲ್ಲಿ ವಿವಾಹ ವಿಚ್ಛೇದನ ಪಡೆಯದಿದ್ದರೂ ಗಂಡ ಹೆಂಡತಿ ಬೇರ್ಪಟ್ಟಿದ್ದರು.

ಆಗಷ್ಟೇ 16 ನೇ ವಯಸ್ಸಿಗೆ ಕಾಲಿಟ್ಟಿದ್ದ ಡಿಂಪಲ್ ಕಪಾಡಿಯಾ ತಮಗಿಂತ 15 ವರ್ಷ ದೊಡ್ಡವರಾದ ರಾಜೇಶ್ ಖನ್ನಾರನ್ನು ಮದುವೆಯಾಗಿದ್ದರು. ಆಗ ಅವರಿಬ್ಬರ ಮದುವೆಗೆ ವಯಸ್ಸು ಅಡ್ಡ ಬಂದಿರಲಿಲ್ಲ.

ರಾಜೇಶ್ ಖನ್ನಾ ಟೀನಾ ಮುನಿಮ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿಗೆ ಡಿಂಪಲ್ ಕಪಾಡಿಯಾ ಬೆಚ್ಚಿಬಿದ್ದರು. ಅವರಿಬ್ಬರ ಪ್ರೀತಿಗೆ ಈ ಹೊಸ ಸಂಬಂಧವೇ ಹುಳಿ ಹಿಂಡಿದ್ದು. ಒಟ್ಟಿನಲ್ಲಿ ನಂತರ ಅವರಿಬ್ಬರ ನಡುವೆ ಬಿರುಕು ಮೂಡಿದ್ದು ಮಾತ್ರ ಸತ್ಯ. (ಏಜೆನ್ಸೀಸ್)

Story first published: Wednesday, August 01, 2012, 14:49 [IST]
Topics: ರಾಜೇಶ್ ಖನ್ನಾ ಡಿಂಪಲ್ ಕಪಾಡಿಯಾ ಬಾಲಿವುಡ್ rajesh khanna dimple kapadia bollywood
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS