ವಸಂತ ನಾಡಿಗೇರ ವಿಜಯ ಕರ್ನಾಟಕ ಸಂಪಾದಕ

Written by: * ಶಾಮ್
Published: Monday, March 26, 2012, 12:55 [IST]

Vasanth Nadiger
ಪ್ರಸಾರ ಸಂಖ್ಯೆಯಲ್ಲಿ ಕರ್ನಾಟಕದ ನಂಬರ್ ಒನ್ ಪತ್ರಿಕೆ ಎನಿಸಿರುವ "ವಿಜಯ ಕರ್ನಾಟಕ" ಸಂಪಾದಕರಾಗಿ ವಸಂತ ನಾಡಿಗೇರ ನೇಮಕಗೊಂಡಿದ್ದಾರೆ. ಸಂಪಾದಕ ಇ. ರಾಘವನ್ ಅವರ ಹಠಾತ್ ನಿಧನದಿಂದಾಗಿ ತೆರವಾದ ಸ್ಥಾನವನ್ನು ಅವರು ತುಂಬಿದ್ದಾರೆ.

"ಕನ್ನಡಪ್ರಭ" ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಹತ್ತು ವರ್ಷ ಕೆಲಸ ಮಾಡಿ ಆನಂತರದ ಹನ್ನೊಂದು ವರ್ಷಗಳಿಂದ ವಿಜಯ ಕರ್ನಾಟಕದಲ್ಲಿ ವಸಂತ್ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಅವರನ್ನು ಪತ್ರಿಕೆಯ ತಾತ್ಕಾಲಿಕ ಸಂಪಾದಕರನ್ನಾಗಿ ( Editor - Acting ) ನೇಮಿಸಲಾಗಿದೆ.

ಪತ್ರಿಕೆಯ ದೆಹಲಿ ಪ್ರತಿನಿಧಿಯಾಗಿರುವ ಬಿ. ಉಮಾಪತಿ ಅವರನ್ನು ಪತ್ರಿಕೆಯ ಸಂಪಾದಕರನ್ನಾಗಿ ಮಾಡಿ, ರಾಘವನ್ ಅವರನ್ನು ಸಂಪಾದಕೀಯ ಸಲಹೆಗಾರರನ್ನಾಗಿ ಇಟ್ಟುಕೊಳ್ಳಬೇಕೆಂಬ ಪ್ರಸ್ತಾವನೆ ಆಡಳಿತ ಮಂಡಳಿಗಿತ್ತು. ಆದರೆ, ಉಮಾಪತಿ ಅವರು ಮನಸ್ಸು ಮಾಡಿರಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಉಮಾ ಒಲವು ಎತ್ತ ಎನ್ನುವುದು ಇನ್ನು ತಿಳಿದುಬರಬೇಕಷ್ಟೆ.

ಮಾಧ್ಯಮದ ಒಂದು ವೇದಿಕೆಗೆ ಸಂಪಾದಕರು ಯಾರು ಎನ್ನುವುದರ ಮೇಲೆ ಆ ಪತ್ರಿಕೆಯ ಜನಪ್ರಿಯತೆ ಅಷ್ಟರಮಟ್ಟಿಗೆ ಅವಲಂಬಿತವಾಗಿರುತ್ತದೆ. ಇದು ಸೆಲೆಬ್ರಿಟಿ ಸ್ಟೇಟಸ್ ಹೊಂದಿರುವ ಸಂಪಾದಕರಿಗೆ ಮಾತ್ರ ಅನ್ವಯಿಸುತ್ತದೆ. ಇತರರಿಗೆ ಇಲ್ಲ.

ಆದರೆ, ಒಂದು ಪತ್ರಿಕೆಯ ನಿರ್ವಹಣೆಯಲ್ಲಿ ಸುದ್ದಿಸಂಪಾದಕನ ಪಾತ್ರ ಅತ್ಯಂತ ಮಹತ್ವವಾಗಿರುತ್ತದೆ. ವಸಂತ ನಾಡಿಗೇರರಿಗೆ ದೊರೆತ ಭಡ್ತಿಯಿಂದಾಗಿ ಪತ್ರಿಕೆಯ ಆರಂಭದ ದಿನದಿಂದಲೂ ಸೇವೆ ಸಲ್ಲಿಸುತ್ತಿರುವ ಲೋಕೇಶ್ ಕಾಯರ್ಗ ಅವರು ವಿಕದ ಸುದ್ದಿಸಂಪಾದಕ ಹುದ್ದೆಗೆ ಏರುವ ಸಾಧ್ಯತೆಯಿದೆ.

ಹಿರಿಯ ಪತ್ರಕರ್ತ ಕೆ. ಸತ್ಯನಾರಾಯಣ ಅವರು ಹೇಳುವ ಪ್ರಕಾರ, ಕರ್ನಾಟಕದ ಅತ್ಯಂತ ದಕ್ಷ ಮತ್ತು ಸಮರ್ಥ ಸುದ್ದಿಸಂಪಾದಕ ದಿವಂಗತ ಖಾದ್ರಿ ಶಾಮಣ್ಣ. ಶಾಮಣ್ಣ "ಪ್ರಜಾವಾಣಿ"ಯಲ್ಲಿ ಸುದ್ದಿ ಸಂಪಾದಕರಾಗಿ ಮಾಡಿದ ಕೆಲಸ ಪತ್ರಿಕೋದ್ಯಮದಲ್ಲಿ ವೃತ್ತಿನಿರತರಾಗಿರುವವರಿಗೆ ತಿಳಿದಿರುತ್ತದೆ. ಶಾಮಣ್ಣ ಅವರಿಗೆ ಕರ್ನಾಟಕದ ನರನಾಡಿಗಳ ಅರಿವಿತ್ತು.

ಇವತ್ತು ಕನ್ನಡನಾಡಿನ ಕೆಲವು ಪತ್ರಿಕೆ, ಟಿವಿ ವಾಹಿನಿಗಳಲ್ಲಿ ಸಂಪಾದಕ ಹುದ್ದೆ ಅಲಂಕರಿಸಿರುವ ವ್ಯಕ್ತಿಗಳ ಹೆಸರೇ ಕೇಳದವರು ಇದ್ದಾರೆ. ಹೆಸರೇ ಗೊತ್ತಿಲ್ಲದಿದ್ದ ಮೇಲೆ ಅವರ ಸಾಮರ್ಥ್ಯ ಮತ್ತು ವರ್ಚಸ್ಸು ಚರ್ಚಿಸುವ ಅಗತ್ಯ ಬೀಳುವುದಿಲ್ಲ.

ಹಾಗಂತ ಅಂಥ ವ್ಯಕ್ತಿಗಳಿಗೆ ಸಂಪಾದಕ ಹುದ್ದೆ ನಿರ್ವಹಿಸುವ ಅರ್ಹತೆ ಇಲ್ಲವೆಂದಲ್ಲ. ಕೆಲವರು ತೆರೆಯಮರೆಯ ಕಾಯಿ ಅಥವಾ ಹಣ್ಣಿನಂತೆ ಕಾರ್ಯ ನಿರ್ವಹಿಸುತ್ತಾರೆ. ಅದರಲ್ಲೂ ಒಂದು ಪತ್ರಿಕೆಯ ಸುದ್ದಿ ನಿರ್ವಹಣೆಯಲ್ಲಿ ಸುದ್ದಿ ಸಂಪಾದಕನ (ಳ) ಕೈಚಳಕ, ಬುದ್ಧಿಚಳಕ ವೆರಿ ಇಂಪಾರ್‌ಟೆಂಟ್ ಆಗುತ್ತದೆ.

ಇವತ್ತಿನ ಪತ್ರಿಕೋದ್ಯಮದ ಎಲ್ಲ ಮೂಲೆಗಳಲ್ಲಿ ತಂತ್ರಜ್ಞಾನ ಆವರಿಸಿಕೊಂಡಿರುವುದರಿಂದ ಸುದ್ದಿ ಸಂಪಾದಕ ಹುದ್ದೆಯ ವ್ಯಾಖ್ಯಾನವೂ ಬದಲಾಗಿದೆ. ಅನುಭವಿಗಳ, ಜವಾಬ್ದಾರಿ ಸ್ಥಾನದಲ್ಲಿರುವರ ಕಣ್ಣಿಗೆ ಬೀಳದೆ ಒಂದು ಸುದ್ದಿ ಬೆಳಕಾಗುವ ಸ್ಥಿತಿ ಇದೆ. ಕಿರಿಯ ಪತ್ರಕರ್ತರಿಗೆ ಇದು ಕಲಿಕೆಯ ಪರ್ವವೂ ಹೌದು, ತಪ್ಪೆಸಗಲು ಸಿಕ್ಕ ಛಾನ್ಸೂ ಹೌದು.

ಮಾತು ಕಡಿಮೆ, ಕೆಲಸ ಹೆಚ್ಚು; ಸಮಯಪಾಲನೆ ಮತ್ತು ಜವಾಬ್ದಾರಿಗೆ ಹೆಸರಾಗಿರುವ, ಸುದ್ದಿಯ ಕೆಮಿಷ್ಟ್ರಿ ಗೊತ್ತಿರುವ, ರಸಾಯನ ಶಾಸ್ತ್ರದ ಸ್ನಾತಕೋತ್ತರ ಪದವೀಧರ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ವಸಂತ ನಾಡಿಗೇರರಿಗೆ ನಮ್ಮ ಅಭಿನಂದನೆಗಳು.

Story first published: Monday, March 26, 2012, 12:55 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS